ಆಸ್ಕರ್ ರಾಜಕೀಯ ಶ್ರೇಷ್ಠ ಸಂತ: ಡಾ.ಎಂ.ವೀರಪ್ಪ ಮೊಯ್ಲಿ
‘ನೆನಪಿನ ಅಂಗಳದಲ್ಲಿ ಆಸ್ಕರ್ ಅಣ್ಣ’ ಕಾರ್ಯಕ್ರಮ

ಮಂಗಳೂರು, ಅ.8: ನಾಲ್ಕು ದಶಕಗಳ ಸುದೀರ್ಘ ಕಾಲ ದೇಶದ ಸಂಸತ್ತಿನಲ್ಲಿ ಲೋಕ ಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿಸಿ, ಕೇಂದ್ರ ಸಚಿವರೂ ಆಗಿ ಅಗಾಧ ಸೇವೆ ಸಲ್ಲಿಸಿದ್ದ ಆಸ್ಕರ್ ಫೆರ್ನಾಂಡಿಸ್ ರಾಜಕೀಯ ಕ್ಷೇತ್ರದ ಸರ್ವ ಶ್ರೇಷ್ಠ ಸಂತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ.ಎಂ. ವೀರಪ್ಪ ಮೊಯ್ಲಿ ಬಣ್ಣಿಸಿದ್ದಾರೆ.
ಇತ್ತೀಚೆಗೆ ಅಗಲಿದ ಆಸ್ಕರ್ ಫೆರ್ನಾಂಡಿಸ್‌ಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸಲು ಆಸ್ಕರ್ ಅಭಿಮಾನಿಗಳು ನಗರದ ಎಸ್‌ಡಿಎಂ ಬಿಬಿಎಂ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ನೆನಪಿನ ಅಂಗಳದಲ್ಲಿ ಆಸ್ಕರ್ ಅಣ್ಣ’ ಕಾರ್ಯಕ್ರಮದಲ್ಲಿ ಅವರು ಆಸ್ಕರ್ ಅವರೊಂದಿನ ನೆನಪುಗಳನ್ನು ಕಾರ್ಯಕ್ರಮದಲ್ಲಿ ತೆರೆದಿಟ್ಟರು.
ಪ್ರಾಮಾಣಿಕ ರಾಜಕಾರಣಿಯಾಗಿದ್ದ ಆಸ್ಕರ್ ಶಿಸ್ತು ಮತ್ತು ಪ್ರಾಮಾಣಿಕತೆಯ ಸಾಕಾರ ಮೂರ್ತಿಯಾಗಿದ್ದರು. ಅವರು ಯಾರನ್ನೂ ನೋಯಿಸಿದವರಲ್ಲ; ಯಾರೊಂದಿಗೂ ಭಿನ್ನಾಭಿಪ್ರಾಯ ಹೊಂದಿದವರಲ್ಲ. ಯಾರಿಗೂ ಅನ್ಯಾಯ ಮಾಡಿದವರಲ್ಲ. ಮಾತು ಕಡಿಮೆ; ಹೆಚ್ಚು ಆಲಿಸುತ್ತಿದ್ದರು. ಅಧಿಕಾರಕ್ಕಾಗಿ ಆಸೆ ಪಡದೆ ಸಿಕ್ಕಿದ್ದನ್ನು ಸ್ವೀಕರಿಸಿ ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸೇವಾ ಕರ್ತೃ ಆಗಿದ್ದರು. ಆದರ್ಶ ವ್ಯಕ್ಯಿತ್ವದ ಅವರ ಸೇವೆ ನಮಗೆ ಇನ್ನೂ ಬೇಕಿತ್ತು ಎಂದು ಮೊಯ್ಲಿ ತಿಳಿಸಿದರು.
ಕೇಂದ್ರ ಸಚಿವರಾಗಿ ಆಸ್ಕರ್ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ ಮಂಜೂರಾತಿ ನೀಡಿದ್ದರು. ಆಗುಂಬೆ ಘಾಟ್ ರಸ್ತೆ ಯನ್ನು ರಾಷ್ಟೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ್ದರು. ಆದರೆ ಅವರು ತಮ್ಮ ಕೆಲಸಗಳನ್ನು ಎಂದೂ ಕೂಡ ಹೇಳಿಕೊಳ್ಳಲು ಹೋಗಿಲ್ಲ ಎಂದರು.
ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಕಾ.ಗಣೇಶ್ ಕಾರ್ಣಿಕ್, ‘ಸಂಸದೀಯ ಮೌಲ್ಯಗಳು ಮತ್ತು ಆಸ್ಕರ್ ಫೆರ್ನಾಂಡಿಸ್’ ವಿಷಯದ ಬಗ್ಗೆ ಮಾತನಾಡಿ, ಆಸ್ಕರ್ ಅವರು ಯಾವತ್ತೂ ವಿಭಜಿತ ಮಾನಸಿಕತೆಗೆ ಅವಕಾಶ ನೀಡಿರಲಿಲ್ಲ. ಎಲ್ಲ ಸಮುದಾಯ ದವರನ್ನು ಪ್ರೀತಿಸುತ್ತಿದ್ದರು. ಮಹಾನ್ ರಾಜ ನೀತಿಜ್ಞರಾಗಿದ್ದು, ಅವರ ಜೀವನ ಮೌಲ್ಯಗಳು ಅನುಕರಣೀಯ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಬೇಧಗಳು ಸಹಜ. ಜನ ಪ್ರತಿನಿಧಿಗಳು ಸದನದಲ್ಲಿ ಕುಳಿತು ಅಭಿಪ್ರಾಯ ಬೇಧಗಳನ್ನು ಮಂಡಿಸಿ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕು. ಇವತ್ತಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ಇದು ಸಾಧ್ಯವೇ ಎನ್ನುವುದರ ಕುರಿತು ಆತ್ಮಾವಲೋಕನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಆಸ್ಕರ್ ಅವರು ಸಮಾಜಕ್ಕೆ ಅರ್ಥಪೂರ್ಣ ಸೇವೆ ನೀಡಿದ್ದು, ಅವರ ಸಮಾಜಮುಖಿ ಚಿಂತನೆ ಮಾದರಿ ಎಂದರು.
ಕಾರ್ಯಕ್ರಮದ ಸಂಚಾಲಕ ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ ಸ್ವಾಗತಿಸಿದರು. ಸಂಘಟನಾ ಸಮಿತಿಯ ಸದಸ್ಯ ಎಂ.ಜಿ. ಹೆಗಡೆ ವಂದಿಸಿದರು. ಪ್ರೊ.ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಆಸ್ಕರ್ ಪತ್ನಿ ಬ್ಲೋಸಂ ಅವರ ಪರವಾಗಿ ಕುಟುಂಬಸ್ಥರಾದ ವಾಲ್ಟರ್ ಡಿಸೋಜ ಅವರಿಗೆ ಹೂವಿನ ಗಿಡ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ , ಕೃಷ್ಣ ಜೆ. ಪಾಲೆಮಾರ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ ಮತ್ತಿತರರು ಭಾಗವಹಿಸಿದ್ದರು.











