"ಶಿಕ್ಷಣ ಕ್ಷೇತ್ರಕ್ಕೆ ಹಿಂದಿರುಗುತ್ತೇನೆ": ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣೀಯನ್ ರಾಜೀನಾಮೆ ಸುಳಿವು

ಫೋಟೊ: twitter.com/SubramanianKri
ಹೊಸದಿಲ್ಲಿ, ಅ. 8: ಭಾರತ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ)ಕೆ.ವಿ. ಸುಬ್ರಮಣೀಯನ್ ಅವರು ಮುಂದಿನ ತಿಂಗಳು ಮೂರು ವರ್ಷದ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಹಿಂದಿರುಗುವುದಾಗಿ ಹೇಳುವ ಮೂಲಕ ತನ್ನ ಹುದ್ದೆಗೆ ರಾಜೀನಾಮೆ ನೀಡುವ ಸುಳಿವನ್ನು ಶುಕ್ರವಾರ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೇಳಿಕೆಯಲ್ಲಿ ಸುಬ್ರಮಣೀಯನ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ನೀಡಿರುವ ಬೆಂಬಲ ಹಾಗೂ ಸ್ಪೂರ್ತಿಗೆ ವಂದನೆ ಸಲ್ಲಿಸಿದ್ದಾರೆ. ‘‘ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ನಾನು ಪ್ರತಿ ದಿನ ನಾರ್ತ್ ಬ್ಲಾಕ್ ಗೆ ನಡೆದುಕೊಂಡು ಹೋಗುತ್ತಿದ್ದೆ. ಆಗ ಈ ಸೌಭಾಗ್ಯದ ಬಗ್ಗೆ ಸ್ಮರಿಸಿಕೊಳ್ಳುತ್ತಿದ್ದೆ. ಈ ಸೌಭಾಗ್ಯದೊಂದಿಗೆ ನನಗೆ ದೊರಕಿದ ಹೊಣೆಗಾರಿಕೆಗೆ ನ್ಯಾಯ ಒದಗಿಸಲು ಸಾಧ್ಯವಾದಷ್ಟು ಶ್ರಮಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.
‘‘ಸರಕಾರದಿಂದ ನಾನು ಅಭೂತಪೂರ್ವ ಉತ್ತೇಜನ ಹಾಗೂ ಬೆಂಬಲವನ್ನು ಪಡೆದಿದ್ದೇನೆ. ಅಲ್ಲದೆ ಹಿರಿಯ ಅಧಿಕಾರಿಗಳೊಂದಿಗೆ ಆತ್ಮಿಯ ಸಂಬಂದವನ್ನು ಆನಂದಿಸಿದ ಅದೃಷ್ಟಶಾಲಿಯಾಗಿದ್ದೇನೆ. ನನ್ನ 3 ದಶಕಗಳ ವೃತ್ತಿ ಜೀವನದಲ್ಲಿ ನಾನು ಇದು ವರೆಗೆ ಪ್ರಧಾನಿ ನರೇಂದ್ರ ಮೋದಿ ಜಿ ಅವರಂತಹ ಸ್ಫೂರ್ತಿದಾಯಕ ವ್ಯಕ್ತಿಯನ್ನು ನೋಡಿಲ್ಲ’’ ಎಂದು ಅವರು ಹೇಳಿದ್ದಾರೆ.
ಪ್ರಮುಖ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವುದಕ್ಕಾಗಿ ಸುಬ್ರಮಣೀಯನ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಂದನೆ ಸಲ್ಲಿಸಿದ್ದಾರೆ. ಉತ್ತರ ಬ್ಲಾಕ್ನಲ್ಲಿ ನಡೆಯುವ ನಿಯತಕಾಲಿಕ ಸಭೆಯಲ್ಲಿ ಮೇಡಂ (ನಿರ್ಮಲಾ ಸೀತಾರಾಮನ್) ಅವರ ಹಾಸ್ಯ ಪ್ರಜ್ಞೆ ಪರಿವರ್ತನೆ ಸಂದರ್ಭ ಅತಿ ಅಗತ್ಯವಾದ ಆರೋಗ್ಯಕರ ಚರ್ಚೆ ಸುಲಲಿತವಾಗಿ ನಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು ಎಂದು ಅವರು ಹೇಳಿದ್ದಾರೆ. ಐಎಸ್ಬಿ ಹೈದರಾಬಾದ್ ನ ಪ್ರಾಧ್ಯಾಪಕರಾಗಿದ್ದ ಸುಬ್ರಮಣೀಯನ್ ಅವರನ್ನು ಕೇಂದ್ರ ಸರಕಾರ 2018 ಡಿಸೆಂಬರ್ನಲ್ಲಿ ಭಾರತದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು. ಅವರು ಅರವಿಂದ ಸುಬ್ರಮಣೀಯನ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.







