ಜಪಮಾಲೆ ಮಾತೆಯ ಹಬ್ಬ ಆಚರಣೆ

ಮಂಗಳೂರು, ಅ.8: ಸಂತ ಆಂತೋನಿ ಆಶ್ರಮದಿಂದ ಜಪಮಾಲೆ ಮಾತೆಯ ಹಬ್ಬ ಆಚರಣೆ ಅಂಗವಾಗಿ ಜೆಪ್ಪು ಸಂತ ಜೋಸೆಫ್ ದೇವಾಲಯದಲ್ಲಿ ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಜಪಮಾಲೆ ಪ್ರಾರ್ಥನೆ ಅತೀ ಪ್ರಭಾವಶಾಲಿ ಪ್ರಾರ್ಥನೆಯಾಗಿದೆ. ಈ ಪ್ರಾರ್ಥನೆ ಮಾಡುವಾಗ ಮಾತೆ ಮೇರಿ ತಮ್ಮ ಭಕ್ತರಿಗಾಗಿ ದೇವರಲ್ಲಿ ವಿಜ್ಞಾಪನೆ ಮಾಡುತ್ತಾರೆ. ಕೆಥೋಲಿಕ್ ಧರ್ಮ-ಸಭೆಯಲ್ಲಿನ ಈ ಸುಂದರವಾದ ಪ್ರಾರ್ಥನೆಯನ್ನು ಕೆಥೋಲಿಕರು ನಿತ್ಯವೂ ಪ್ರಾರ್ಥಿಸಲು ಭಕ್ತರಿಗೆ ಕರೆ ನೀಡಿದರು.
ಬಲಿಪೂಜೆಯ ನಂತರ ಅಲಂಕರಿಸಿದ ಮಾತೆ ಮೇರಿಯ ಪ್ರತಿಮೆಯನ್ನು ಮೊಂಬತ್ತಿಯ ಮೆರವಣಿಗೆಯಿಂದ ಜೆಪ್ಪು ಸಂತ ಆಂತೋನಿ ಆಶ್ರಮಕ್ಕೆ ತರಲಾಯಿತು. ಆಶ್ರಮದ ಮೈದಾನದಲ್ಲಿ ನೆರೆದಿದ್ದ ಜನರಿಗೆ ಜೆಪ್ಪು ಸಂತ ಜೋಸೆಫ್ ಗುರುಮಠದ ಪ್ರೊ.ಫಾ. ಮ್ಯಾಕ್ಸಿಂ ಡಿಸೋಜ ಪ್ರವಚನ ಮಾಡಿದರು.
ಸಂತ ವಿನ್ಸೆಂಟ್ ಫೆರ್ರೆರ್ ದೇವಾಲಯ, ವೆಲೆನ್ಸಿಯ, ಸಂತ ರೀತಾ ದೇವಾಲಯ, ಕಾಸ್ಸಿಯಾ, ಹೋಲಿ ರೋಸರಿ ಕಾನ್ವಂಟ್, ಜೆಪ್ಪು ಅವರ ಗಾಯನ ಮಂಡಳಿಯ ಸದಸ್ಯರು ಮತ್ತು ಸಂತ ಜೆಪ್ಪು ಆಶ್ರಮದ ವಿದ್ಯಾರ್ಥಿಗಳು ಮಾತೆ ಮೇರಿಯ ಗೌರವಾರ್ಥ ಭಕ್ತಿ ಗೀತೆಗಳನ್ನು ಹಾಡಿದರು. ಆಶ್ರಮ ನಿಯೋಜಿತ ನಿರ್ದೇಶಕ ಫಾ. ಜಾನ್ ಬ್ಯಾಪ್ಟಿಸ್ಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಆಶ್ರಮದ ನಿರ್ದೇಶಕ ಫಾ.ಒನಿಲ್ ಡಿಸೋಜ, ಆಶ್ರಮದ ಸಹಾಯಕ ನಿರ್ದೇಶಕ ಫಾ.ಲ್ಯಾರಿ ಪಿಂಟೊ ಉಪಸ್ಥಿತರಿದ್ದರು.







