ಬೋನಿಗೆ ಸೆರೆಯಾಗದ ಚಿರತೆ: ಮತ್ತೊಂದು ಸುತ್ತಿನ ಕೂಂಬಿಂಗ್‌ಗೆ ನಿರ್ಧಾರ
ಮಂಗಳೂರು, ಅ.8: ನಗರದ ಮರೋಳಿ ಜಯನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಂಡು ಬಂದಿದ್ದ ಚಿರತೆ ಮೂರು ದಿನಗಳ ಕಾರ್ಯಾಚರಣೆ, ಬೋನಿಗೆ ಸೆರೆಯಾಗದ ಕಾರಣ ಅರಣ್ಯ ಇಲಾಖೆಯವರು ಶನಿವಾರವೂ ಮತ್ತೊಂದು ಸುತ್ತಿನ ಕೂಂಬಿಂಗ್ (ಕಾರ್ಯಾಚರಣೆ) ನಡೆಸಲು ನಿರ್ಧರಿಸಿದ್ದಾರೆ.
ಮರೋಳಿ ಜಯನಗರದ 4ನೇ ಕ್ರಾಸ್‌ನ ಮನೆಯೊಂದರ ಬಳಿ ಅ.3 ಮತ್ತು ಅ.6ರಂದು ಮರೋಳಿ ಕನಪದವು ಬಳಿ ಚಿರತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಚಿರತೆ ಎಲ್ಲೂ ಪತ್ತೆಯಾಗಿಲ್ಲ. ಮಂಗಳವಾರದಿಂದ ಬೋನು ಇಟ್ಟು ಚಿರತೆ ಸೆರೆಗೆ ಪ್ರಯತ್ನ ನಡೆಸಲಾಗಿದ್ದರೂ ಯಾವುದೇ ಸುಳಿವು ಸಿಗಲಿಲ್ಲ.
ಮತ್ತೆ ಕಾರ್ಯಾಚರಣೆ: ಮೂರು ದಿನಗಳಿಂದ ಬೋನು ಇರಿಸಿದ್ದೇವೆ. ಶುಕ್ರವಾರ ಚಿರತೆಯ ಸುಳಿವು, ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಆದರೂ ಶನಿವಾರ ಅಧಿಕಾರಿಗಳು, ಸಿಬ್ಬಂದಿ ಜತೆಗೂಡಿ ಮತ್ತೆ ಕೂಂಬಿಂಗ್ ಮುಂದುವರಿಸಲಿದ್ದೇವೆ. ಆ ಬಳಿಕ ಮುಂದಿನ ನಿರ್ಧಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.





