''ಶೈಕ್ಷಣಿಕ ಸೌಲಭ್ಯವಿಲ್ಲದೆ ಬಹಳ ಕಷ್ಟಪಟ್ಟೆ'': ಭಾಷಣದ ವೇಳೆ ಭಾವುಕರಾದ ಸಚಿವ ಶ್ರೀರಾಮುಲು

ರಾಯಚೂರು, ಅ.8: ನಾನು ಓದುವಾಗ ಯಾವುದೇ ಸೌಲಭ್ಯವಿಲ್ಲದೇ ಕಷ್ಟಪಟ್ಟು ವ್ಯಾಸಂಗ ಮಾಡಿದೆ. ಆದರೆ ಇಂದು ಪರಿಶಿಷ್ಟ ಜಾತಿ ಪಂಗಡಗಳ ಶೈಕ್ಷಣಿಕ ಅಭಿವೃದ್ಧಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಸಂಸ್ಕಾರದೊಂದಿಗೆ ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಮ್ಮ ಶೈಕ್ಷಣಿಕ ದಿನಗಳನ್ನು ಸ್ಮರಿಸಿದರು.
ಶುಕ್ರವಾರ ಮಾನ್ವಿ ತಾಲೂಕಿನ ಶಿರವಾರದಲ್ಲಿ 52 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾಗಾಂಧಿ ವಸತಿಶಾಲೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಶಾಲೆ ದೇವಸ್ಥಾನವಿದ್ದಂತೆ, ದೇವರಿಗೆ ಭಕ್ತಿಯಿಂದ ಬೇಡುವಂತೆ, ಶಾಲೆಗಳಲ್ಲಿ ಗುರುಗಳಿಗೆ ಭಕ್ತಿ ಗೌರವದಿಂದ ವಿದ್ಯೆ ಕಲಿಯಬೇಕು ಎಂದರು.
ವಿಲಾಸಿ ಜೀವನಕ್ಕೆ ಮಾರುಹೋಗದೆ ಸಜ್ಜನರ ಸಂಗಮಾಡಿ, ಗುರುಗಳ ಮಾರ್ಗದರ್ಶನದೊಂದಿಗೆ ಉತ್ತಮ ಶಿಕ್ಷಣ ಪಡೆಯಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಶ್ರೋಯೋಭಿವೃದ್ಧಿಗೆ ಸರಕಾರ ಕಂಕಣಬದ್ಧವಾಗಿದೆ. ಅನೇಕ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಶ್ರೀರಾಮುಲು ಹೇಳಿದರು.
ವಸತಿ ಶಾಲೆಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡ, ವಸತಿ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಕಲಿಕೆ ರೂಢಿಸಿಕೊಳ್ಳಬೇಕು. ಸಜ್ಜನರಾಗಿ, ಸತ್ಪ್ರಜೆಗಳಾಗಿ, ಸ್ವಾವಲಂಬಿಗಳಾಗಿ ಹೊರಹೊಮ್ಮಬೇಕು ಎಂದು ಅವರು ಕರೆ ನೀಡಿದರು.
ಶಾಸಕ ರಾಜಾವೆಂಕಟಪ್ಪ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸದ ರಾಜ ಅಮರೇಶ್ವರ ನಾಯಕ, ಮತ್ತಿತರ ಜನಪ್ರತಿನಿಧಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಪಿ.ಎಸ್.ಕಾಂತರಾಜು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ಉಪನಿರ್ದೇಶಕ ಸುರೇಶ್ ರೆಡ್ಡಿ, ರಾಜಶೇಖರ, ಚಿದಾನಂದಪ್ಪ ಕೆ, ಉಪನಿರ್ದೇಶಕ ರಾಜಕುಮಾರ ಉಪಸ್ಥಿತರಿದ್ದರು. ಉಪನಿರ್ದೇಶಕ ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.







