ಕುಂಡುಝ್: ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ; 100 ಮಂದಿ ಸಾವನ್ನಪ್ಪಿರುವ ಶಂಕೆ, ಹಲವರಿಗೆ ಗಾಯ

ಸಾಂದರ್ಭಿಕ ಚಿತ್ರ
ಕಾಬೂಲ್,ಅ.8: ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಶುಕ್ರವಾರ ನಡೆದ ಭೀಕರ ಬಾಂಬ್ ಸ್ಪೋಟದಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆಂದು ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಯಾ ಮುಸ್ಲಿಮರನ್ನು ಗುರಿಯಿರಿಸಿ ಭಯೋತ್ಪಾದಕರು ಈ ದಾಳಿಯನ್ನು ನಡೆಸಿರಬಹುದೆಂದು ಶಂಕಿಸಲಾಗಿದೆ.
ಕುಂಡುಝ್ ಪ್ರಾಂತದಲ್ಲಿರುವ ಶಿಯಾ ಸಮುದಾಯಕ್ಕೆ ಸೇರಿದ ಗೊಝಾರೆ ಸಯ್ಯದ್ ಅಬಾದ್ ಮಸೀದಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಶುಕ್ರವಾರದ ಸಾಮೂಹಿಕ ನಮಾಝ್ ನಡೆಯುತ್ತಿದ್ದ ಸಂದರ್ಭ ಬಾಂಬ್ ಸ್ಫೋಟ ನಡೆದಿದೆಯೆನ್ನಲಾಗಿದೆ.
ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಗುಂಪು ವಹಿಸಿಕೊಂಡಿಲ್ಲ. ಆದರೆ ಈ ಭೀಕರ ಕೃತ್ಯದ ಹಿಂದೆ ಐಸಿಸ್ ಉಗ್ರರ ಕೈವಾಡವಿದೆಯೆಂದು ಶಂಕಿಸಲಾಗಿದೆ.
ಒಂದು ವೇಳೆ ಸ್ಫೋಟದಲ್ಲಿ 100 ಮಂದಿ ಮೃತಪಟ್ಟಿರುವುದು ದೃಢಪಟ್ಟಲ್ಲಿ, ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳ ನಿರ್ಗಮನದ ಬಳಿಕ ಅಫ್ಘಾನಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳ ಪೈಕಿ ಅತ್ಯಧಿಕ ಮಂದಿ ಸಾವನ್ನಪ್ಪಿದ ಘಟನೆ ಇದಾಗಿದೆ.
ಸ್ಫೋಟದಿಂದ ನಾಶಗೊಂಡ ಮಸೀದಿಯಲ್ಲಿ ಜನರು ಮೃತದೇಹಗಳಿಗಾಗಿ ಹುಡುಕಾಡುತ್ತಿರುವುದನ್ನು ಹಾಗೂ ಪತ್ತೆಯಾದ ಶವಗಳನ್ನು ಹಾಗೂ ಗಾಯಾಳುಗಳನ್ನು ಆ್ಯಂಬುಲೆನ್ಸ್ ಗಳಲ್ಲಿ ಸಾಗಿಸುತ್ತಿರುವ ಕರುಣಾಜನಕ ದೃಶ್ಯಗಳ ವಿಡಿಯೋ ಹಾಗೂ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ತಾಲಿಬಾನ್ನ ಮುಖ್ಯ ವಕ್ತಾರ ಝಬಿಯುಲ್ಲಾ ಮುಹಮ್ಮದ್ ಅವರು ಕುಂಡುಝ್ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ಹೇಳಿದ್ದರಾದರೂ ಸಾವುನೋವಿನ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ತಾಲಿಬಾನ್ ವಿಶೇಷ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಿವೆ .
ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಐಸಿಸ್ ಖೋರೋಸಾನ್ ಗುಂಪಿನ ಉಗ್ರರು ಕಾಬೂಲ್ ನಲ್ಲಿ ಎರಡು ಬಾಂಬ್ ಸ್ಪೋಟ ಸೇರಿದಂತೆ ಅಫ್ಘಾನಿಸ್ತಾನದ ವಿವಿಧೆಡೆ ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.







