ಆನ್ಲೈನ್ ವಿಚಾರಣೆ ಕಾರ್ಯಸಾಧುವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ. 8: ಆನ್ಲೈನ್ ವಿಚಾರಣೆ ಕಾರ್ಯಸಾಧುವಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿಪಾದಿಸಿದೆ. ಪ್ರಕರಣಗಳ ಆನ್ಲೈನ್ ವಿಚಾರಣೆ ನಿಯಮದಂತೆ ನಡೆಯಲು ಸಾಧ್ಯವಿಲ್ಲ. ಆದುದರಿಂದ ಪ್ರಕರಣಗಳನ್ನು ಭೌತಿಕವಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ‘‘ನ್ಯಾಯಾಲಯದಲ್ಲಿ ಕುಳಿತುಕೊಳ್ಳುವುದು ಹಾಗೂ ಪರದೆಯನ್ನು ನೋಡುವುದು ನಮಗೆ ಸಂತಸ ನೀಡುವುದಿಲ್ಲ’’ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ ಹೇಳಿದೆ.
ನ್ಯಾಯಾಲಯಗಳು ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಹಾಗೂ ಎಲ್ಲ ಪ್ರಜೆಗಳಿಗೆ ನ್ಯಾಯ ಲಭ್ಯವಾಗಬೇಕು ಎಂದು ನಾವು ಬಯಸುತ್ತೇವೆ ಎಂದು ಪೀಠ ಹೇಳಿದೆ. ‘‘ನಾವು ಆನ್ಲೈನ್ ವಿಚಾರಣೆ ನಡೆಸಲು ಪ್ರಯತ್ನಿಸಿದೆವು. ಆದರೆ, ಅದು ಕಾರ್ಯಸಾಧುವಲ್ಲ. ಜನರು ನ್ಯಾಯಾಲಯಕ್ಕೆ ಬರುತ್ತಿಲ್ಲ. ಸಹಜತೆ ಮರಳಿದೆ. ಆದುದರಿಂದ ನ್ಯಾಯಾಲಯಗಳು ಭೌತಿಕವಾಗಿ ಕಾರ್ಯ ನಿರ್ವಹಿಸಬೇಕು’’ ಎಂದು ಅವರು ಹೇಳಿದರು.
ಆನ್ಲೈನ್ ನ್ಯಾಯಾಲಯದಲ್ಲಿ ವಿಚಾರಣೆ ಕಕ್ಷಿದಾರರ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ಸರಕಾರೇತರ ಸಂಸ್ಥೆಯಾದ ನ್ಯಾಷನಲ್ ಫೆಡರೇಶನ್ ಆಫ್ ಸೊಸೈಟಿಸ್ ಫಾರ್ ಫಾಸ್ಟ್ ಜಸ್ಟಿಸ್ ಆ್ಯಂಡ್ ಹಾಗೂ ಜುಲಿಯೋ ರಿಬೈರೊ, ಶೈಲೇಶ್ ಆರ್. ಗಾಂಧಿಯಂತಹ ಗಣ್ಯ ನಾಗರಿಕರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಷಯದ ಕುರಿತು ನೋಟಿಸು ಜಾರಿ ಮಾಡಿತು. ಸಲಹೆಗಳನ್ನು ಸಲ್ಲಿಸುವಂತೆ ಪೀಠ ದೂರುದಾರರಿಗೆ ಸೂಚಿಸಿತು. ಅಲ್ಲದೆ, ಇದನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಾಲ್ಕು ವಾರಗಳ ಬಳಿಕ ಮುಂದಿನ ದಿನಾಂಕವನ್ನು ಪರಿಗಣಿಸಲಾಗುವುದು ಎಂದು ತಿಳಿಸಿತು.







