ಬಡ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಸೇನಾ ತರಬೇತಿ
ಬೆಂಗಳೂರು, ಅ.8: ಭಾರತೀಯ ಸೇನೆಯು ಬಡವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರನ್ನು ಗುರಿಯಾಗಿಸಿಕೊಂಡು ಸೇನೆಗೆ ಸೇರಲು ಉಚಿತ ಸೈನಿಕ ತರಬೇತಿ ನೀಡುವ ಉದ್ದೇಶದಿಂದ ‘ಭಾರತ ರಕ್ಷಕ ಪ್ರತಿಷ್ಠಾನ ’ ಸೈನಿಕ್ ಕಲ್ಯಾಣ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಹಾಗೂ ರಘುರಾಮ್ ರೆಡಿ ಭದ್ರತಾ ಸಂಸ್ಥೆಯ ನಿರ್ದೇಶಕ ಎನ್.ರಘುರಾಮ್ ರೆಡ್ಡಿ ನೇತೃತ್ವದಲ್ಲಿ ಆರಂಭವಾಗಿದೆ.
‘ದೇಶ ಭಕ್ತಿ ಬಗ್ಗೆ ಹೆಚ್ಚು ಜನ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಸೇನೆ ಸೇರಲು ಹೆಚ್ಚು ಜನ ಮುಂದೆ ಬರುತ್ತಿಲ್ಲ. ಜಾತಿ, ಧರ್ಮ, ಮತ, ಭೇದವಿಲ್ಲದೇ ದೇಶಕ್ಕಾಗಿ ದುಡಿಯುವ ಸಂಕಲ್ಪ ಹೊಂದಿರುವವರನ್ನು, ಅದರಲ್ಲೂ ಬಡ ಮಕ್ಕಳಿಗೆ ಸಮಗ್ರ ತರಬೇತಿ ನೀಡಿ, ಸಿಪಾಯಿ, ಅಧಿಕಾರಿಗಳ ಮಟ್ಟಕ್ಕೆ ಬೆಳೆಸಲು ಈ ತರಬೇತಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಒಮ್ಮೆ ಸಶಸ್ತ್ರ ಪಡೆಗಳ ತರಬೇತಿ ನೀಡಿದರೆ ಅರೆ ಸೈನಿಕ, ಪೊಲೀಸರಾಗಿ ಸೇರಲು ಅರ್ಹರಾಗುತ್ತಾರೆ’ ಎಂದು ರವಿ ಮುನಿಸ್ವಾಮಿ ತಿಳಿಸಿದರು.
ಈ ತರಬೇತಿ ಕೇವಲ ಪರೀಕ್ಷೆ ಬರೆಯಲು ಮಾತ್ರ ಸೀಮಿತವಾಗಿರದೆ ವ್ಯಕ್ತಿತ್ವದಲ್ಲಿ ಸಮಗ್ರ ಬದಲಾವಣೆ ತರುವ ಗುರಿ ಹೊಂದಿದ್ದು, ದೈಹಿಕ ಹಾಗೂ ಸಂದರ್ಶನ ಪರೀಕ್ಷೆ ಎದುರಿಸುವ ಹಲವಾರು ವಿಷಯಗಳ ಕುರಿತು ಬಡ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 9449888085/8012580993 ಗೆ ಆಸಕ್ತರು ಸಂಪರ್ಕಿಸಬಹುದಾಗಿದೆ.





