ಲಖಿಂಪುರ ಹಿಂಸಾಚಾರ ವಿರೋಧಿಸಿ ರೈತರಿಂದ ಅ.18ರಂದು ರೈಲ್ ರೋಕೋ, ಅ.26ಕ್ಕೆ ಮಹಾಪಂಚಾಯತ್

ಹೊಸದಿಲ್ಲಿ: ಉತ್ತರಪ್ರದೇಶ ಲಖಿಂಪುರ ಖೇರಿಯಲ್ಲಿ ರವಿವಾರ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವನ್ನು ವಿರೋಧಿಸಿ ಅಕ್ಟೋಬರ್ 18 ರಂದು ರೈತ ಸಂಘಟನೆಗಳು ' ರೈಲ್ ರೋಕೋ' ಹಾಗೂ 26 ರಂದು ಲಕ್ನೊದಲ್ಲಿ 'ಮಹಾಪಂಚಾಯತ್' ನಡೆಸಲು ನಿರ್ಧರಿಸಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಹಾಗೂ ಎಫ್‌ಐಆರ್‌ನಲ್ಲಿ ಕೊಲೆ ಆರೋಪಿ ಎಂದು ಹೆಸರಿಸಲಾಗಿದ್ದರೂ ರಾಜೋರೋಷವಾಗಿ ಓಡಾಡುತ್ತಿರುವ ಸಚಿವರ ಮಗ ಆಶಿಶ್ ನನ್ನು ಬಂಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
"ದೇಶದಾದ್ಯಂತದ ರೈತರು ಅಕ್ಟೋಬರ್ 12 ರಂದು ಲಖಿಂಪುರ ಖೇರಿಯನ್ನು ತಲುಪುತ್ತಾರೆ ... ಲಖಿಂಪುರ ಖೇರಿಯಲ್ಲಿ ನಡೆದಿರುವುದು ಜಲಿಯನ್ ವಾಲಾ ಬಾಗ್ ಗಿಂತ ಕಡಿಮೆ ಏನಿಲ್ಲ ಮತ್ತು ಅಲ್ಲಿ ಎಲ್ಲಾ ನಗರ ಸಂಸ್ಥೆಗಳು ತಮ್ಮ ನಗರಗಳಲ್ಲಿ ರಾತ್ರಿ 8 ಗಂಟೆಗೆ (ಅಕ್ಟೋಬರ್ 12 ರಂದು) ಕ್ಯಾಂಡಲ್ ಮೆರವಣಿಗೆಗಳನ್ನು ಕೈಗೊಳ್ಳುವಂತೆ ನಾವು ವಿನಂತಿಸುತ್ತೇವೆ’’ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಇಂದು ಹೇಳಿದರು.
"ರೈತರು ಪ್ರತಿ ರಾಜ್ಯಕ್ಕೆ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಚಿತಾಭಸ್ಮದೊಂದಿಗೆ ಹೋಗುತ್ತಾರೆ. ಬಳಿಕ ಅದನ್ನು ವಿಸರ್ಜಿಸುತ್ತಾರೆ. ಅಕ್ಟೋಬರ್ 15ರಂದು ನಡೆಯುವ ದಸರಾ ದಿನದಂದು ಎಲ್ಲ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ಸುಡಲಿದ್ದಾರೆ. ಅಕ್ಟೋಬರ್ 18 ರಂದು ನಾವು ' ರೈಲ್ ರೋಕೋ' ನಡೆಸುತ್ತೇವೆ ... 26 ರಂದು ಲಕ್ನೋದಲ್ಲಿ ಬೃಹತ್ ಮಹಾಪಂಚಾಯತ್ ನಡೆಯಲಿದೆ’’ ಎಂದರು.





