ಸಿಎನ್‌ಜಿ ವಾಹನಗಳಿಗೆ ಇಂಧನ ಕೊರತೆ: ಸಿಎನ್‌ಜಿ ಬಳಕೆದಾರರ ಸಂಘ ಅಸಮಾಧಾನ

ಮಂಗಳೂರು, ಅ.9: ದ.ಕ. ಜಿಲ್ಲೆಯಲ್ಲಿ ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ಚಾಲಿತ ವಾಹನಗಳ ಖರೀದಿ ಹೆಚ್ಚಾಗುತ್ತಿದ್ದರೂ ನಿಗದಿತ ಪೆಟ್ರೋಲ್ ಬಂಕ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ, ಸಿಎನ್‌ಜಿ ಅನಿಲದ ಕೊರತೆಯಿಂದ ಈಗಾಗಲೇ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಸಿಎನ್‌ಜಿ ಬಳಕೆದಾರರ ಸಂಘ ಹಾಗೂ ನಾಗರಿಕ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಿಎನ್‌ಜಿ ಬಳಕೆದಾರರ ಸಂಘದ ಸ್ಥಾಪಕ ಅಧ್ಯಕ್ಷ ಶ್ರೀನಾಥ್, ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವಾಗಿ ಸಿಎನ್‌ಜಿ ಇಂಧನ ಬೆಂಗಳೂರಿನ ಪೂರೈಕೆ ವ್ಯವಸ್ಥೆಯನ್ನು ಗೇಲ್ ಸಂಸ್ಥೆ ಆರಂಭಿಸಿತ್ತು. ಆದರೆ ಇದೀಗ ಖರೀದಿಸಿದವರೇ ಇಂಧನಕ್ಕಾಗಿ ಸಂಕಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಆಗುವವರೆಗೆ ಖರೀದಿದಾರರು ತಮ್ಮ ನಿರ್ಧಾರವನ್ನು ಮುಂದೂಡಬೇಕೆಂದು ಆಗ್ರಹಿಸಿದರು.
ನಗರದ ಹೊರವಲಯದ ಕಾವೂರು, ಅಡ್ಯಾರು, ಸುರತ್ಕಲ್ ಬಳಿಯ ಹೊಸಬೆಟ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಸದ್ಯ ಸಿಎನ್‌ಜಿ ಇಂಧನ ಮಾರಾಟ ನಡೆಯುತ್ತಿದೆ. ಆದರೆ ಕಾವೂರು ಹೊರತುಪಡಿಸಿ ಇತರ ಬಂಕ್‌ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಇಂಧನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆರಂಭದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಸಿಎನ್‌ಜಿ ವಾಹನಗಳು ಇದೀಗ ಲಾಕ್‌ಡೌನ್ ಬಳಿಕ ಹೆಚ್ಚಳ ಕಾಣುತ್ತಿದೆ. ಅಧಿಕ ಇಂಧನ ಕ್ಷಮತೆಯುಳ್ಳ ಸಿಎನ್‌ಜಿ ಕಿಟ್ ಅಳವಡಿಕೆಗೆ ವಾಹನ ಖರೀದಿದಾರರು ಮುಂದಾಗುತ್ತಿದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಸಿಎನ್‌ಜಿ ಇಂಧನಕ್ಕಾಗಿ ನಗರದಲ್ಲಿ ಈಗಾಗಲೇ ಇಂತಹ ವಾಹನ ಹೊಂದಿರುವವರು ಗಂಟೆಗಟ್ಟಲೆ ಬಂಕ್‌ಗಳಲ್ಲಿ ಕಾಯುವ ಪರಿಸ್ಥಿತಿ ಇದೆ. ಗೇಲ್ ಸಂಸ್ಥೆಯ ಉಸ್ತುವಾರಿಯಲ್ಲಿ ನಗರದ ಬೈಕಂಪಾಡಿ ಪ್ರದೇಶದಲ್ಲಿ ಸಿಎನ್‌ಜಿಯನ್ನು ನಗರದ ವಿವಿಧ ಪಂಪ್‌ಗಳಿಗೆ ಸ್ಥಳೀಯವಾಗಿ ವಿತರಿಸಲು ಸುಸಜ್ಜಿತ ಸಿಎನ್‌ಜಿ ಸ್ಥಾವರ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಸದ್ಯ ಸಿಎನ್‌ಜಿ ಆಸಕ್ತಿದಾರರು ತಮ್ಮ ಖರೀದಿ ಪ್ರಕ್ರಿಯೆ ಮುಂದೂಡಬೇಕು. ತಮ್ಮಲ್ಲಿರುವ ಪೆಟ್ರೋಲ್ ಚಾಲಿತ ವಾಹನಗಳನ್ನು ಕಿಟ್ ಅಳವಡಿಸಿ ಸಿಎನ್‌ಜಿ ವಾಹನಗಳನ್ನಾಗಿ ಮಾರ್ಪಡಿಸಲು ಇಚ್ಚಿಸುವವರು ಸದ್ಯ ಪೆಟ್ರೋಲ್‌ನಲ್ಲಿಯೇ ವಾಹನ ಓಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿಎನ್‌ಜಿ ರಿಕ್ಷಾ ಚಾಲಕರ ಸಂಘದ ಜಯರಾಂ ಶೆಟ್ಟಿ ಮಾತನಾಡಿ, ಇಂಧನ ಕ್ಷಮತೆಯ ಇರಾದೆಯಿಂದ ಆ ಸೌಲಭ್ಯದ ವಾಹನ ಖರೀದಿಸಿದ್ದು, ಇದೀಗ ಇಂಧನಕ್ಕಾಗಿ ಮುಂಜಾನೆ 2 ಗಂಟೆಯ ಹೊತ್ತಿನಿಂದ ಮಧ್ಯಾಹ್ನದವರೆಗೆ ಪಂಪ್‌ಗಳಲ್ಲಿ ಕ್ಯೂ ನಿಲ್ಲಬೇಕಾದ ಪ್ರಮೇಯ ಎದುರಾಗಿದೆ. ಇದರಿಂದ ಸರಿಯಾಗಿ ದುಡಿಮೆ ಇಲ್ಲದೆ ಸಾಲ ಮಾಡಿ ಖರೀದಿಸಿದ ವಾಹನಕ್ಕೆ ಕಂತಿನ ಹಣ ಪಾವತಿಸಲೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಂಗಳೂರು ನಗರದಲ್ಲಿ ಸಿಎನ್‌ಜಿ ಇಂಧನ ಚಾಲಿತ ಸುಮಾರು 60ಕ್ಕೂ ಅಧಿಕ ರಿಕ್ಷಾಗಳು, 15ಕ್ಕೂ ಅಧಿಕ ಲಾರಿಗಳು ಹಾಗೂ ಕಾರುಗಳಿರುವುದಾಗಿ ಅಂದಾಜಿಸಲಾಗಿದೆ. ಜಿಲ್ಲೆಯ ಹೊರಭಾಗದಿಂದಲೂ ಕಾವೂರಿನ ಪೆಟ್ರೋಲ್ ಬಂಕಿಗೆ ಸಿಎನ್‌ಜಿ ತುಂಬಿಸಲು ರಾತ್ರೋರಾತ್ರಿ ಲಾರಿಗಳು ಬರುವುದರಿಂದ ಸ್ಥಳೀಯ ಸಿಎನ್‌ಜಿ ಬಳಕೆದಾರ ವಾಹನಗಳವರು ಸಂಕಷ್ಟಪಡುತ್ತಿದ್ದಾರೆ. ಇದಕ್ಕೆ ಅವಕಾಶವಾಗಬಾರದು ಎಂದು ಡಾ.ಪೂರ್ಣಿಮಾ ಭಟ್ ಅಭಿಪ್ರಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಲೋಕೇಶ್, ಸಂದೀಪ್ ಉಪಸ್ಥಿತರಿದ್ದರು.







