ದತ್ತಪೀಠದ ವಿಚಾರದಲ್ಲಿ ಉಪಸಮಿತಿ ರಚಿಸುವ, ಅಕ್ಷೇಪಣೆ ಕೇಳುವ ಅಗತ್ಯವಿಲ್ಲ: ಪ್ರಮೋದ್ ಮುತಾಲಿಕ್
"ದತ್ತನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಓಟಿಗಾಗಿ ಜಾತ್ಯತೀರಾಗಲು ಹೊರಟಿದ್ದಾರೆ"

ಚಿಕ್ಕಮಗಳೂರು: ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ವಿವಾದ ಸಂಬಂಧ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರಕಾರ ಉಪಸಮಿತಿ ನೇಮಕ ಮಾಡುವ ಹಾಗೂ ಯಾವುದೇ ಆಕ್ಷೇಪಣೆ ಕೇಳುವ ಅಗತ್ಯವಿಲ್ಲ. ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾಕ್ಕೆ ಹಿಂದೂ ಅರ್ಚಕರ ನೇಮಕ ಸಂಬಂಧ ರಾಜ್ಯ ಸರಕಾರ ಇನ್ನು ಕಾಲಹರಣ ಮಾಡದೇ ಕೂಡಲೇ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ವಿವಾದ ಸಂಬಂದ ಇತ್ತೀಚೆಗೆ ಹೈಕೋರ್ಟ್ ತೀರ್ಪಿನಿಂದಾಗಿ ಹಿಂದಿನ ಕಾಂಗ್ರೆಸ್ ಸರಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದಂತಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ ಹಿಂದೂ ದೇವಾಲಯಕ್ಕೆ ಮುಸ್ಲಿಂ ಸಮುದಾಯದ ಮುಜಾವರ್ ನೇಮಕ ಮಾಡುವ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿತ್ತು. ಸದ್ಯ ನ್ಯಾಯಾಲಯದ ತೀರ್ಪು ಇಡೀ ಹಿಂದೂ ಸಮುದಾಯದಲ್ಲಿ ಸಮಾಧಾನಕ್ಕೆ ಕಾರಣವಾಗಿದೆ. ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸರಕಾರ ಕಾಲಹರಣ ಮಾಡದೇ ಕೂಡಲೇ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕೆಂದರು.
ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ಸಂಬಂಧ ಕೋರ್ಟ್‍ನ ತೀರ್ಪಿನಂತೆ ಉಪಸಮಿತಿ ರಚಿಸಿದ್ದು, ಈ ವಿವಾದ ಸಂಬಂಧ ಆಕ್ಷೇಪಣೆಗಳ ಸಲ್ಲಿಕೆ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ. ಆದರೆ ಹಿಂದೂ ಅರ್ಚಕರ ನೇಮಕ ಸಂಬಂಧ ಯಾವ ಉಪಸಮಿತಿಯ ಅಗತ್ಯವಿಲ್ಲ, ಆಕ್ಷೇಪಣೆಗಳನ್ನು ಕೇಳುವುದೂ ಬೇಡ. ದತ್ತಪೀಠಕ್ಕಾಗಿ ಮೂರು ದಶಕಗಳಿಂದ ಹೋರಾಟ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಅರ್ಚಕರ ನೇಮಕ ಸಂಬಂಧ ರಾಜ್ಯ ಸರಕಾರಕ್ಕೆ ಇನ್ನೂ ಕಾಲಾವಕಾಶ ನೀಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವುದೇ ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ಆಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರು ಗೆಲ್ಲುತ್ತಿರುವುದೂ ಇದೇ ವಿಚಾರಕ್ಕೆ. ಇದುವರೆಗೂ ಈ ವಿವಾದ ಬಗೆಹರಿಸಿ ಎಂದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಸಬೂಬು ಹೇಳಲಾಗುತ್ತಿತ್ತು. ಆದರೆ ಸದ್ಯ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇದೆ. ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ವಿವಾದ ಬಗೆಹರಿಸುವ ಅವಕಾಶವೂ ಬಿಜೆಪಿ ಸರಕಾರದ ಮುಂದಿದ್ದು, ರಾಜಕೀಯ ಕಾರಣಕ್ಕಾಗಿ ಇಂತಹ ಅವಕಾಶವನ್ನು ನಿರ್ಲಕ್ಷ್ಯ ಮಾಡದೆ ಕೂಡಲೇ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಬಿಜೆಪಿ ಸರಕಾರದವರು ದತ್ತನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ದತ್ತಪೀಠದ ವಿಚಾರದಲ್ಲಿ ಹಿಂದುಗಳಿಗೆ ನ್ಯಾಯ ಒದಗಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ. ಮುಸ್ಲಿಮರ ಓಟಿನಾಸೆಗಾಗಿ ಈ ವಿಚಾರದಲ್ಲಿ ಕಾಲಾಹರಣ ಮಾಡಬಾರದು. ಹಿಂದು ಅರ್ಚಕರನ್ನು ನೇಮಕ ಮಾಡದೇ ಹಿಂದುಗಳಿಗೆ ಮೋಸ ಮಾಡಿದಲ್ಲಿ ಹಿಂದುಗಳು ಬಿಜೆಪಿಯವರನ್ನು ಕ್ಷಮಿಸುವುದಿಲ್ಲ ಎಂದರು.
ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾಕ್ಕೆ ಚಿಕ್ಕಮಗಳೂರು ನಗರದಿಂದ ಎರಡು ಬಸ್‍ಗಳು ಸಂಚರಿಸುತ್ತಿದ್ದು, ಈ ಬಸ್‍ಗಳು ಮಸ್ಲಿಮರದ್ದೇ ಆಗಿವೆ. ಬಸ್‍ಗಳು ವಿಮೆ, ಫಿಟ್ನೆಸ್ ಪ್ರಮಾಣ ಪತ್ರ, ತೆರಿಗೆ ಕಟ್ಟಿದ ದಾಖಲೆಗಳನ್ನೇ ಹೊಂದಿಲ್ಲ. ಅಲ್ಲದೇ ಸುಮಾರು 40 ಜೀಪ್‍ಗಳು ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದು, ಈ ಜೀಪ್‍ಗಳೂ ಸೂಕ್ತ ದಾಖಲೆಗಳನ್ನು ಹೊಂದಿಲ್ಲ. ಆದರೂ ಆರ್‍ಟಿಒ ಅಧಿಕಾರಿಗಳು ಬಸ್ ಹಾಗೂ ಜೀಪ್ ಮಾಲಕರಿಂದ ಲಂಚ ಪಡೆದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್, ಬಸ್ ಹಾಗೂ ಜೀಪ್‍ಗಳ ಮಾಲಕರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
'ಜಮ್ಮು ಕಾಶ್ಮೀರದಿಂದ ಮುಸ್ಲಿಮರನ್ನು ಹೊರಗಟ್ಟಿ': ಜಮ್ಮು ಕಾಶ್ಮೀರದಲ್ಲಿ ಉಗ್ರರು ಇತ್ತೀಚೆಗೆ 7 ಹಿಂದುಗಳನ್ನು ಹತ್ಯೆ ಮಾಡಿದ್ದಾರೆ. ಕಾಶ್ಮೀರದಲ್ಲಿರುವ ಉಗ್ರರು ತಾಲಿಬಾನಿಗಳು, ಪಾಕಿಸ್ತಾನದ ಉಗ್ರರ ನೆರವಿನಿಂದ ಈ ದುಷ್ಕೃತ್ಯ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ ಅಲ್ಲಿನ ಉಗ್ರರನ್ನು ಸದೆಬಡಿಯಬೇಕು. ಹಿಂದುಗಳ ಹತ್ಯೆಯನ್ನು ತಡೆಯಬೇಕು. ಅಲ್ಲಿನ ಮುಸ್ಲಿಮರು ಉಗ್ರರಿಗೆ ಬೆಂಬಲ ನೀಡುತ್ತಿದ್ದು, ಎಲ್ಲ ಮುಸ್ಲಿಮರನ್ನು ಹೊರಗಟ್ಟಬೇಕೆಂದು ಇದೇ ವೇಳೆ ಮುತಾಲಿಕ್ ಹೇಳಿದರು.
'ಬೆಳಗಾವಿ ಮುಸ್ಲಿಂ ಯುವಕನ ಹತ್ಯೆಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ': ಬೆಳಗಾವಿಯಲ್ಲಿ ಹಿಂದು ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಯುವಕನನ್ನು ಸುಫಾರಿ ಪಡೆದು ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿ ಈ ಹಿಂದೆ ಶ್ರೀರಾಮಸೇನೆಯಲ್ಲೇ ಇದ್ದ. ಆದರೆ ಕೆಲ ವರ್ಷಗಳ ಹಿಂದೆ ಆತ ನಮ್ಮ ಸಂಘಟನೆಯಿಂದ ಹೊರ ಹೋಗಿ ಶ್ರೀರಾಮಸೇನೆ ಹಿಂದೂಸ್ತಾನ ಎಂಬ ಸಂಘಟನೆ ಕಟ್ಟಿಕೊಂಡಿದ್ದಾನೆ. ಆದ್ದರಿಂದ ಮುಸ್ಲಿಂ ಯುವಕನ ಹತ್ಯೆ ಘಟನೆಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದರು.
ದತ್ತಪೀಠದ ವಿಚಾರದಲ್ಲಿ ಕಾಂಗ್ರೆಸ್ಸಿಗರ ಗಟ್ಟಿತನ ಬಿಜೆಪಿಯವರಲ್ಲಿಲ್ಲ. ಬಿಜೆಪಿಯವರು ದತ್ತನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದರೂ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಮೀನಮೇಷ ಎಣಿಸುತ್ತಿರುವುದು, ದೇವಸ್ಥಾನ ಕೆಡುವಿರುವುದು, ಗಣೇಶೋತ್ಸವದ ವಿಚಾರದಲ್ಲಿ ಬಿಜೆಪಿ ಸರಕಾರ ತಳೆದ ನಿಲುವು ನೋಡಿದರೆ ಬಿಜೆಪಿಯವರು ಇತ್ತೀಚೆಗೆ ಜಾತ್ಯತೀತರಾಗಲು ಹೊರಟಿರುವಂತೆ ಕಾಣುತ್ತಿದೆ. ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ. ಬಿಜೆಪಿ ಸಚಿವರು, ಶಾಸಕರ ಪತ್ನಿಯರು ಬುರ್ಕಾ ಧರಿಸಿ ಮುಸ್ಲಿಮರ ಬೀದಿಗಳಲ್ಲಿ ತಿರುಗಾಡಿದರೂ ಒಂದೇ ಒಂದು ಓಟು ಬಿಜೆಪಿಯವರಿಗೆ ಸಿಗಲ್ಲ.
- ಪ್ರಮೋದ್ ಮುತಾಲಿಕ್







