ಮಾಧ್ಯಮ ವಿಶ್ಲೇಷಣೆ ವೆಬ್ ಸೈಟ್ ನ್ಯೂಸ್ ಲಾಂಡ್ರಿಯ ಯೂಟ್ಯೂಬ್ ಚಾನಲ್ ಗೆ ನಿರ್ಬಂಧ

ಮಾಧ್ಯಮಗಳ ಕಾರ್ಯ ವೈಖರಿಯನ್ನು ವಿಶ್ಲೇಷಿಸುವ ನ್ಯೂಸ್ ಲಾಂಡ್ರಿ ( newslaundry.com ) ವೆಬ್ ತಾಣದ ಯೂಟ್ಯೂಬ್ ಚಾನಲ್ ಮೇಲೆ ನಿರ್ಬಂಧ ಹಾಕಲಾಗಿದೆ. ಅದರ ಪ್ರಕಾರ ಆ ಚಾನಲ್ ಗೆ ನ್ಯೂಸ್ ಲಾಂಡ್ರಿ ಯಾವುದೇ ಹೊಸ ವಿಡಿಯೋ ಕಾರ್ಯಕ್ರಮ ಅಪ್ಲೋಡ್ ಮಾಡುವಂತಿಲ್ಲ. ಈ ಬಗ್ಗೆ 'ನ್ಯೂಸ್ ಲಾಂಡ್ರಿ' ಕೂಡ ಸುದ್ದಿ ಪ್ರಕಟಿಸಿ ಖಚಿತಪಡಿಸಿದೆ.
"ನಮ್ಮ ಮಿತ್ರರಾದ ಆಜ್ ತಕ್ ನವರು ನಮಗೆ ಒಂದರ ಹಿಂದೊಂದರಂತೆ ಹಲವು ಕಾಪಿ ರೈಟ್ ಸ್ಟ್ರೈಕ್ ಗಳನ್ನು ಕಳಿಸಿದ್ದರಿಂದ ಈಗ ನಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ಮೇಲೆ ನಿರ್ಬಂಧ ಹಾಕಲಾಗಿದೆ. ನಮ್ಮ ವಿರುದ್ಧ ಕಳೆದ ಎರಡು ವಾರಗಳಲ್ಲೇ 50 ಕ್ಕೂ ಹೆಚ್ಚು ಇಂತಹ ಕಾಪಿ ರೈಟ್ ಸ್ಟ್ರೈಕ್ ಗಳನ್ನು ಕಳಿಸಲಾಗಿದೆ. ಇದರಿಂದ ಒಟ್ಟು ಚಾನಲ್ ನಿಷ್ಕ್ರಿಯಗೊಳಿಸುವ ಸಾಧ್ಯತೆಯೂ ಇದೆ " ಎಂದು 'ನ್ಯೂಸ್ ಲಾಂಡ್ರಿ' ಪ್ರಕಟಣೆಯಲ್ಲಿ ತಿಳಿಸಿದೆ.
"ಆದರೆ ಮಾಧ್ಯಮಗಳ ಇಬ್ಬಂದಿತನವನ್ನು ಎತ್ತಿ ತೋರಿಸುವ ಕೆಲಸ ನಿಲ್ಲಬಾರದು. ಹಾಗಾಗಿ ಈ ವಾರದ ಮನೀಷಾ ಪಾಂಡೆ ಅವರ ನ್ಯೂಸ್ ಸೆನ್ಸ್ ಕಾರ್ಯಕ್ರಮ ನಮ್ಮ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಡೈಲಿ ಮೋಷನ್ ಹಾಗು ವಿಮೆಯೋ (https://vimeo.com/626519018/d895420305) ವೇದಿಕೆಗಳಲ್ಲಿ ಲಭ್ಯವಿದೆ. ಈ ಕಾರ್ಯಕ್ರಮದಲ್ಲಿ 'ಆಜ್ ತಕ್' ನಮ್ಮ ವಿರುದ್ಧ ಕಾಪಿ ರೈಟ್ ಸ್ಟ್ರೈಕ್ ಕಳಿಸಲು ಏನು ಕಾರಣ ಮತ್ತು ನಾವು ಅಂತಹ ಯಾವುದೇ ಅಕ್ರಮ ಬಳಕೆ ಮಾಡಿಲ್ಲ ಎಂಬುದನ್ನು ವಿವರಿಸಲಾಗಿದೆ. ವಿಮರ್ಶೆ , ಟೀಕೆ ಕಾಪಿ ರೈಟ್ ಆಗುವುದಿಲ್ಲ ಎಂದು 'ನ್ಯೂಸ್ ಲಾಂಡ್ರಿ' ಹೇಳಿದೆ.







