ಹೆಲಿಕಾಪ್ಟರ್ ಇಳಿಯಲು ಬಿಡಲಾರೆವು ಎಂದು ರೈತರ ಎಚ್ಚರಿಕೆ:ಕೈಥಾಲ್ ಜಿಲ್ಲಾ ಭೇಟಿ ರದ್ದುಪಡಿಸಿದ ಹರ್ಯಾಣ ಸಿಎಂ

ಚಂಡಿಗಡ: ರೈತರು ತನ್ನ ಭೇಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ನಾನು ಅಗರ್ವಾಲ್ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಕೈಥಾಲ್ ಜಿಲ್ಲಾ ಭೇಟಿ ರದ್ದುಪಡಿಸಿದ ಬಳಿಕ ಪ್ರತಿಕ್ರಿಯಿಸಿದರು.
ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಹಾಜರಾಗಲು ಬರುತ್ತಿರುವ ಮುಖ್ಯಮಂತ್ರಿಯ ಹೆಲಿಕಾಪ್ಟರ್ ಕೆಳಗೆ ಇಳಿಯಲು ನಾವು ಅವಕಾಶ ನೀಡುವುದಿಲ್ಲ ಎಂದು ರೈತರು ಜಿಲ್ಲಾಡಳಿತದ ಅಧಿಕಾರಿಗಳಿಗೆ ತಿಳಿಸಿದ ಬಳಿಕ ಸಿಎಂ ಖಟ್ಟರ್ ತಮ್ಮ ಕಾರ್ಯಕ್ರಮ ರದ್ದುಪಡಿಸಿದರು.
ಅಗರ್ವಾಲ್ ಸಮುದಾಯಕ್ಕೆ ಸೇರಿರುವ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ. ಹೀಗಾಗಿ ನನ್ನ ಪರವಾಗಿ ವಿಧಾನಸಭಾ ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಂಚಕುಲದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ರೈತರುಗಳು ಹರ್ಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ನಾಯಕರುಗಳ ರಾಜಕೀಯ ಕಾರ್ಯಕ್ರಮವನ್ನು ವಿರೋಧಿಸುತ್ತಾ ಬಂದಿದ್ದು, ಕೈಥಾಲ್ ಸಮೀಪದ ಸ್ಥಳದಲ್ಲಿ ಒಟ್ಟುಸೇರಲು ಆರಂಭಿಸಿದ್ದಾರೆ.







