2025ರೊಳಗೆ ರಾಜ್ಯದಲ್ಲಿ 10,000 ಪೊಲೀಸ್ ವಸತಿ ಗೃಹ ನಿರ್ಮಾಣ: ಗೃಹ ಸಚಿವ ಅರಗ ಜ್ಞಾನೇಂದ್ರ
ಉಡುಪಿಯಲ್ಲಿ ನೂತನ ಪೊಲೀಸ್ ವಸತಿಗೃಹ ಸಮುಚ್ಛಯ ಉದ್ಘಾಟನೆ

ಉಡುಪಿ, ಅ.9: ರಾಜ್ಯದಲ್ಲಿ ಗೃಹ ಇಲಾಖೆಯ ವತಿಯಿಂದ 2025 ರೊಳಗೆ 10,000 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಇದೀಗ 200 ಕೋಟಿ ರೂ ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳ ನಿರ್ಮಾಣ ನಡೆಯುತಿದ್ದು, 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಉಡುಪಿ ಮಿಷನ್ ಕಾಂಪೌಂಡ್ ಬಳಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ 56 ವಸತಿಗೃಹಗಳನ್ನು ಒಳಗೊಂಡ ನೂತನ ಪೊಲೀಸ್ ವಸತಿಗೃಹ ಸಮುಚ್ಛಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಯ ಬಲವರ್ಧನೆಗೆ ದಾಖಲೆಯ ಆರ್ಥಿಕ ನೆರವು ನೀಡಲಾಗಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ಐದು ಕಟ್ಟಡಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ ನಡೆಯುತಿದ್ದು, ಆ ಬಳಿಕ ರಾಜ್ಯದಲ್ಲಿ 13 ಠಾಣೆಗಳು ಮಾತ್ರ ಸ್ವಂತ ಕಟ್ಟಡ ಹೊಂದಲು ಬಾಕಿ ಉಳಿಯುತ್ತವೆ. ಅದನ್ನು ಸಹ ಬೇರೆ ಬೇರೆ ಮೂಲಗಳಿಂದ ಅನುದಾನ ಪಡೆದು ಕಟ್ಟಡ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಇದರೊಂದಿಗೆ ಪೊಲೀಸ್ ಇಲಾಖೆಯ ಬಲವರ್ಧನೆಗೂ ವಿಶೇಷ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಸೀನ್ ಆಫ್ ಕ್ರೈಂ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ನಡೆಯುತ್ತಿದ್ದು, ಅಪರಾಧ ಪತ್ತೆಯಲ್ಲಿ ವಿಶೇಷ ತರಬೇತಿ ಪಡೆದವ ರಾಗಿದ್ದು, ಅಪರಾಧ ಘಟಿಸಿದ ಸ್ಥಳದಲ್ಲಿ ವಿಶೇಷ ಸಾಕ್ಷ್ಯ ಸಂಗ್ರಹಿಸಲಿದ್ದಾರೆ. ಇದರೊಂದಿಗೆ ಸೈಬರ್ ಕ್ರೈಮ್‌ಗಳ ಪತ್ತೆಗೆ ವಿಶೇಷ ಆದ್ಯತೆ ನೀಡುತಿದ್ದೇವೆ ಎಂದರು.
ಇದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಇಲಾಖೆಯಲ್ಲಿ ಅಳವಡಿಸಿದ್ದು, ಸೈಬರ್ ಅಪರಾಧಗಳನ್ನು ಪತ್ತೆ ಮಾಡಲು ಎಲ್ಲಾ ಬ್ಯಾಂಕ್ ಗಳೊಂದಿಗೆ ಒಪ್ಪಂದ ಮಾಡಿ ಕೊಳ್ಳಲಾಗಿದೆ. ಹಣ ಕಳೆದುಕೊಂಡು ವ್ಯಕ್ತಿ 1-2 ಗಂಟೆಯೊಳಗೆ ದೂರು ನೀಡಿದರೆ ಆ ವ್ಯಕ್ತಿಯ ಖಾತೆಯನ್ನು ನಿರ್ಬಂಧಕ್ಕೊಳಪಡಿಸಲಾಗುವುದು. ತಕ್ಷಣ ದಲ್ಲಿ ಲಿಖಿತ ದೂರು ನೀಡಲು ಸಾಧ್ಯವಾಗದಿದ್ದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಕರೆ ಮಾಡಿದ 10ರಿಂದ 15ನಿಮಿಷದೊಳಗೆ ಪೊಲೀಸರು ಸ್ಥಳಕ್ಕೆ ತಲುಪುವ ವ್ಯವಸ್ಥೆ ಇದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ನೆರವು ಅಗತ್ಯವಿದ್ದರೆ 112ಕ್ಕೆ ಕರೆ ಮಾಡುವಂತೆ ಸಚಿವರು ಹೇಳಿದರು.
ಉಡುಪಿ ಜಿಲ್ಲೆಗೆ 108 ಪೊಲೀಸ್ ಮನೆಗಳ ಮಂಜೂರಾತಿಯಾಗಿದೆ. ಹಾಗೆಯೇ ಹೆಬ್ರಿಗೆ ನೂತನ ಪೊಲೀಸ್ ಠಾಣೆ ಕಟ್ಟಡಕ್ಕೆ ಮಂಜೂರಾತಿ ನೀಡಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದ ಅರಗ ಜ್ಞಾನೇಂದ್ರ, ಶಾಸಕ ರಘುಪತಿ ಭಟ್‌ರ ಬೇಡಿಕೆಯಂತೆ ಮಣಿಪಾಲಕ್ಕೆ ಹೊಸ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ನೀಡಲಾಗುವುದು ಎಂದರು.
ಎನ್‌ಓಸಿ ಇಲ್ಲದ 15,000 ಕಟ್ಟಡ: ಬೆಂಗಳೂರಿನಲ್ಲಿ ಅಗ್ನಿಶಾಮಕ ದಳದಿಂದ ನಿರಪೇಕ್ಷಣಾ ಪತ್ರ ಇಲ್ಲದ 15,000 ಬಹು ಮಹಡಿ ಕಟ್ಟಡಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನುಡಿದ ಸಚಿವರು, ಇನ್ನು ಮುಂದೆ ಯಾವುದೇ ಬಹುಮಹಡಿ ಕಟ್ಟಡದಲ್ಲಿ ಅಗ್ನಿದುರಂತ ಸಂಭವಿಸಿದಾಗ ಅಗ್ನಿಶಾಮಕ ವಾಹನ ಬರಲು ಅನುಕೂಲವಾಗುವಂತೆ, ಕಟ್ಟಡ ನಿರ್ಮಾಣಕ್ಕೆ ಮೊದಲು ಹಾಗೂ ನಂತರ ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಅನುಮತಿ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು. ಜನರ ಬದುಕಿನ ಜೊತೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.
ಮಾದಕ ವಸ್ತುಗಳ ನಿಯಂತ್ರಣ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಸಾರ್ವಜನಿಕರು ಈ ಬಗ್ಗೆ ಇಲಾಖೆಯೊಂದಿಗೆ ಸಹಕರಿಸಿ, ಮಾಹಿತಿಗಳನ್ನು ಇಲಾಖೆಗೆ ನೀಡಬೇಕು. ಬೆಂಗಳೂರಿನಲ್ಲಿರುವ ಎಫ್‌ಎಸ್‌ಎಲ್ ಲ್ಯಾಬ್‌ನ್ನು ಅತ್ಯಾಧುನೀಕರಣಗೊಳಿಸಿದ್ದು, 252 ಮಂದಿ ಎಫ್‌ಎಸ್‌ಎಲ್ ಅಧಿಕಾರಿಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಸೈಬರ್ ಕ್ರೈಂ ತನಿಖೆಗೆ ಸಂಬಂಧಿಸಿದಂತೆ ಗುಜರಾತ್ ಸರಕಾರದೊಂದಿಗೆ ಎಂಓಯು ಮಾಡಿಕೊಳ್ಳ ಲಾಗಿದೆ. ರಾಜ್ಯದ ಸಿಬ್ಬಂದಿಗಳನ್ನು ಅಲ್ಲಿಗೆ ತರಬೇತಿಗಾಗಿ ಕಳುಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ವಾಗಿದ್ದು, ಮಧ್ಯವರ್ತಿಗಳನ್ನು ನಂಬಿ ಯಾರೂ ಮೋಸ ಹೋಗಬೇಡಿ. ಇಂತಹ ಮಧ್ಯವರ್ತಿಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹೇಳಿದರು. ಪೊಲೀಸರಿಗೆ ಸಂಬಂಧಿಸಿದ ಔರಾದ್ ಕರ್ ವರದಿಯಂತೆ ಶೇ.80 ರಷ್ಟು ಮಂದಿಗೆ ಸೌಲಭ್ಯಗಳು ದೊರೆತಿವೆ. ಉಳಿದ ಶೇ.20ರಷ್ಟು ಮಂದಿಗೆ ಭತ್ಯೆಗಳನ್ನು ಹೆಚ್ಚಿಸಿ ಅವರಿಗೂ ನ್ಯಾಯ ದೊರಕುವಂತೆ ಮಾಡಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರದಲ್ಲಿ ಪೊಲೀಸರಿಗೆ ವಸತಿಗೃಹಗಳ ಕೊರತೆ ಇದ್ದು, ದೊಡ್ಡಣಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳನ್ನು ನೆಲಸಮ ಮಾಡಿ, ಸಮುಚ್ಛಯ ಮಾದರಿಯಲ್ಲಿ ನೂತನ ಗೃಹಗಳ ನಿರ್ಮಾಣ, ಶ್ರೀಕೃಷ್ಣಮಠ ಪರಿಸರದಲ್ಲಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣ ಮತ್ತು ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆಗೆ ಮಂಜೂರು ನೀಡುವಂತೆ ಕೋರಿದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಪಂ ಸಿಇಓ ಡಾ.ನವೀನ್ ಭಟ್, ಎಎನ್‌ಎಫ್ ಹಾಗೂ ಕರಾವಳಿ ಕಾವಲು ಪಡೆ ಎಸ್ಪಿ ನಿಖಿಲ್ ಉಪಸ್ಥಿತರಿದ್ದರು.
ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿರೇ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್. ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ವಂದಿಸಿದರು. ಬಿ. ಮನಮೋಹ್ ರಾವ್ ಕಾರ್ಯಕ್ರಮ ನಿರೂಪಿಸಿದರು.











