ಭಾಷಾ ಪ್ರಾಧ್ಯಾಪಕರಲ್ಲಿ 'ಎನ್‌ಇಪಿ' ಬಗ್ಗೆ ಆತಂಕ; ಕಡ್ಡಾಯ ಬೇಡ-ಇಚ್ಛೆಗೆ ಅವಕಾಶ ನೀಡಲು ಮನವಿ
ಮಂಗಳೂರು, ಅ.9: ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯ ಪದವಿ ಪಠ್ಯಕ್ರಮದಲ್ಲಿ ಭಾಷಾ ವಿಷಯದ ಆಯ್ಕೆಗೆ ಸಂಬಂಧಿಸಿ ವಿದ್ಯಾರ್ಥಿಗಳ ಇಚ್ಛೆಗೆ ಅವಕಾಶ ಸಿಗದಿದ್ದರೆ, ಸಾವಿರಾರು ಸಂಖ್ಯೆಯಲ್ಲಿರುವ ಭಾಷಾ ಪ್ರಾಧ್ಯಾಪಕರು ನಿರುದ್ಯೋಗಿಗಳಾಗುವ ಭೀತಿ ಎದುರಿಸುತ್ತಿದ್ದಾರೆ.
ನೂತನ ಶಿಕ್ಷಣ ನೀತಿ ಮಾರ್ಗಸೂಚಿಯಂತೆ ಪದವಿಯಲ್ಲಿ ಎರಡು ಭಾಷಾ ವಿಷಯ ಕಲಿಯಲು ಅವಕಾಶವಿದೆ. ಆ ಪೈಕಿ ಒಂದನ್ನು (ಕನ್ನಡ) ಕಡ್ಡಾಯಗೊಳಿಸಲಾಗಿದ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತ, ತುಳು, ಕೊಂಕಣಿ, ಕೊಡವ, ಉರ್ದು ಮತ್ತಿತರ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿವೆ. ಆದರೆ ಬಹುತೇಕ ವಿದ್ಯಾರ್ಥಿಗಳು ಆಂಗ್ಲಭಾಷಾ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಇತರ ಭಾಷೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಿಕ್ಷಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಹಿಂದಿ, 600ಕ್ಕೂ ಅಧಿಕ ಸಂಸ್ಕೃತ ಪ್ರಾಧ್ಯಾಪಕರಲ್ಲದೆ ತುಳು, ಕೊಂಕಣಿ, ಕೊಡವ, ಉರ್ದು ಭಾಷಾ ಶಿಕ್ಷಕರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯು ಯಥಾವತ್ ಪಾಲನೆಗೊಂಡರೆ ಭಾಷಾ ಶಿಕ್ಷಕರ ಉದ್ಯೋಗಕ್ಕೆ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಡಿ ಎನ್‌ಇಪಿ ಆಶಯಕ್ಕೆ ಒತ್ತು ಸಿಗಬೇಕಾದರೆ, ಪದವಿ ತರಗತಿಯಲ್ಲಿ ತಮ್ಮ ಇಚ್ಛೆಗೆ ಅನುಗುಣವಾಗಿ ಅಧ್ಯಯನ ಮಾಡಲು ಅವಕಾಶ ಕೊಡಬೇಕು. ರಾಷ್ಟ್ರೀಯ ಭಾವೈಕ್ಯ ಪ್ರತಿಬಿಂಬಿಸುವ ಭಾಷೆ ಓದುವ ನಿಯಮ ಮಾಡುವುದು ವೈಜ್ಞಾನಿಕ ಮತ್ತು ನ್ಯಾಯೋಚಿತವಾಗಿದೆ. ರಾಜ್ಯದ ಎಲ್ಲ ವಿವಿಗಳಲ್ಲಿ ಎರಡು ಭಾಷೆ ಅಧ್ಯಯನಕ್ಕೆ ಅವಕಾಶವಿದ್ದು, ಈ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಬೇಕು. ಒಂದು ವೇಳೆ ಅವಕಾಶ ಸಿಗದಿದ್ದರೆ ತುಳು, ಕೊಂಕಣಿ ಭಾಷೆಗಳಿಗೂ ವಿದ್ಯಾರ್ಥಿಗಳ ಕೊರತೆಯಾಗಲಿದೆ. ಹಾಗಾಗಿ ಅಕಾಡಮಿಗಳ ಅಧ್ಯಕ್ಷರೂ ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬೇಕಿದೆ ಎಂದು ಭಾಷಾ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ.
ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದೆ. ಯಾವುದೇ ವಿಷಯ ಅಥವಾ ಭಾಷೆಯನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ಇದರಿಂದ ವಿದ್ಯಾರ್ಥಿಗಳಿಗೂ, ಅದನ್ನು ಕಲಿಸುವ ಅಧ್ಯಾಪಕರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಪ್ರಸ್ತುತ ಒಂದು ಭಾಷೆ ಅನಿವಾರ್ಯ ಮಾಡಿದರೆ, ಭಾಷಾ ಶಿಕ್ಷಕರಿಗೆ ಸಮಸ್ಯೆಯಾಗುವುದು ಖಚಿತ. ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದೆ ಎಂದು ಹಿಂದಿ ಪ್ರಾಧ್ಯಾಪಕರ ರಾಜ್ಯ ಸಂಘದ ಅಧ್ಯಕ್ಷ ಡಾ.ಎಸ್.ಎ.ಮಂಜುನಾಥ್ ಒತ್ತಾಯಿಸಿದ್ದಾರೆ.
ಭಾಷಾ ಪ್ರಾಧ್ಯಾಪಕರ ಆತಂಕ ಗಮನಕ್ಕೆ ಬಂದಿದೆ. ಸರಕಾರದ ಮಟ್ಟದಲ್ಲಿ ನಡೆದ ನಿರ್ಧಾರವಾಗಿರುವುದರಿಂದ ವಿವಿ ಹಂತದಲ್ಲಿ ಏನೂ ಮಾಡುವಂತಿಲ್ಲ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.







