ಮುಸ್ಲಿಮರ ಮತಗಳನ್ನು ಬಿಜೆಪಿ ಬಯಸುವುದಿಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ವಲಸಿಗ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅತಿಕ್ರಮಣ ನಡೆಯುತ್ತಿದೆ

ಗುವಾಹಟಿ: ಅಸ್ಸಾಂನಲ್ಲಿ ಬಂಗಾಳಿ ಮೂಲದ ಮುಸ್ಲಿಂ ಸಮುದಾಯದ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶನಿವಾರ ಹೇಳಿದ್ದಾರೆ
19 ನೇ ಆವೃತ್ತಿಯ India Today Conclave 2021 ರಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, "ನನಗೆ ಮಿಯಾ(ಬಂಗಾಳ ಮೂಲದ ಮುಸ್ಲಿಮರು) ಮುಸ್ಲಿಮರ ಮತಗಳು ಬೇಡ, ನಾವು ಸಾಮರಸ್ಯದಿಂದ ಬದುಕುತ್ತೇವೆ. ನಾನು ಅವರ ಬಳಿ ಮತ ಬೇಡಲು ಹೋಗುವುದಿಲ್ಲ ಹಾಗೂ ಅವರು ನನ್ನ ಬಳಿಗೆ ಬರುವುದಿಲ್ಲ ಎಂದರು.
ಅಸ್ಸಾಂ ಅಸ್ಮಿತೆ, ಸಂಸ್ಕೃತಿ ಹಾಗೂ ಭೂಮಿಯನ್ನು ಕಳೆದುಕೊಂಡಿದ್ದಕ್ಕೆ ರಾಜ್ಯದ ಅನೇಕ ಜನರು ವಲಸಿಗ ಮುಸ್ಲಿಮರು ಮೂಲ ಕಾರಣ ಎಂದು ನಂಬಿದ್ದಾರೆ. ಅಸ್ಸಾಂನಲ್ಲಿ ಯಾವುದೇ ಸಮುದಾಯ ಆಧಾರಿತ ರಾಜಕೀಯವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ವಲಸಿಗ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅತಿಕ್ರಮಣ ನಡೆಯುತ್ತಿದೆ. ಅನೇಕ ಅಸ್ಸಾಮಿ ಜನರು ಈ ರೀತಿ ಯೋಚಿಸುತ್ತಾರೆ. ಈ ಪ್ರಕ್ರಿಯೆಯು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಯಿತು. ಈ ಇತಿಹಾಸದ ಹೊರೆಯನ್ನು ನನ್ನೊಂದಿಗೆ ಹೊತ್ತುಕೊಂಡಿದ್ದೇನೆ" ಎಂದು ಹಿಮಂತ ಬಿಸ್ವ ಶರ್ಮ ಹೇಳಿದರು.