ಎಲ್ಲ ಧರ್ಮಗಳು ಮಾನವೀಯತೆಯ ಪರವಾಗಿವೆ : ಬಿಂದಿಯಾ ನಾಯಕ್
ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಬಂಟ್ವಾಳ: ಧರ್ಮ ಎನ್ನುವುದು ಸಹನಾಶೀಲ ಹಾಗೂ ಜೀವ ಪರವಾಗಿ ಇರುವಂತದ್ದು. ಅದುವೆ ಸರ್ವೇ ಜನ ಸುಖಿನ ಭವಂತು ಎಂಬುದನ್ನು ಪ್ರಸ್ತಾಪಿಸುತ್ತದೆ. ಆದರೆ ಇಂದು ದ್ವೇಷವೇ ಧರ್ಮವಾಗುವ ಅಪಾಯದ ಹಂತದಲ್ಲಿ ನಾವು ಇದ್ದೇವೆ. ಮೊಬೈಲ್ ಇದರ ರಹದಾರಿಯಾಗಿವೆ. ಪುಸ್ತಕ ಪ್ರೀತಿ ಮತ್ತು ಗ್ರಂಥಾಲಯ ಇದರ ಪರಿಹಾರವಾಗಬಹುದು ಎಂದು ಬಿಂದಿಯಾ ನಾಯಕ್ ಇವರು ಅಭಿಪ್ರಾಯಪಟ್ಟರು.
ಅವರು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
"ಮನಸ್ಸು ಮತ್ತು ದೇಹ ಈ ಎರಡಕ್ಕೂ ರೋಗ ಬಾಧೆಯ ಅಪಾಯವಿದೆ. ದೇಹದ ಅನಾರೋಗ್ಯಕ್ಕೆ ವೈದ್ಯರ ಮದ್ದು ಔಷಧಿ ಹಾಗೂ ಮಾನಸಿಕ ಅನಾರೋಗ್ಯಕ್ಕೆ ನಂಬಿಕೆ ಪ್ರೀತಿ-ವಿಶ್ವಾಸದ ಮೌಲ್ಯಗಳು ಔಷಧಿಯಾಗಿದೆ. ಇದು ನಮಗೆ ಗೊತ್ತಿಲ್ಲದಂತೆ ವೈದ್ಯರು ಹಾಗೂ ಧಾರ್ಮಿಕ ಕೇಂದ್ರಗಳ ಮೂಲಕ ನಡೆಯುತ್ತಾ ಇರುತ್ತವೆ ಎಂದು ಡಾ. ಎಂ ಶಿವಪ್ರಸಾದ್ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಾದ ಧನುಶ್ರೀ ಬ್ರಹ್ಮರಕೂಟ್ಲು, ಅಶ್ವಿನಿ, ಪುಣ್ಯ ಕೀರ್ತಿ ನೆತ್ತರಕೆರೆ, ರಕ್ಷ ತುಂಬೆ, ಚರಣ್ಯ ಕೊಡ್ಮಾಣ್, ಭವ್ಯಶ್ರೀ ಅಜ್ಜಿಬೆಟ್ಟು ಹಾಗೂ ಶ್ರೇಯ ಬೆಂಜನಪದವು ಇವರನ್ನು ಶಾಲಾ ಮಟದ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆಗೈದ ಕಾರಣಕ್ಕಾಗಿ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಮಾಜಿ ಸೈನಿಕ ಡಿಕೇಶ್ ಮುಂಡಾಜೆ ಇವರನ್ನು ಸನ್ಮಾನಿಸಲಾಯಿತು.
ಬಳಿಕ ಯಕ್ಷ ಜಾತಿ ಜ್ಯೋತಿ ಗುಡ್ಡೆ ಸಂಯೋಜನೆಯಲ್ಲಿ ತರಿಕಿಟ ಕಲಾ ಕಮ್ಮಟ ರಿ. ಜ್ಯೋತಿಗುಡ್ಡೆ ಮತ್ತು ಧೀಂಕಿಟ ಯಕ್ಷ ಕಲಾ ಕೇಂದ್ರ ಮೊಡಂಕಾಪು ಇದರ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಮಾದುಕೋಡಿಯ ವಿಜಯ ಸುವರ್ಣ, ಕನಪಡಿತ್ತಾಯ ದೈವದ ಪಾತ್ರಿ ಶ್ರೀ ದೂಮ ಮೂಲ್ಯ, ನೀರುಮಾರ್ಗದ ಜಯಗುರು ಕೆಟರರ್ಸ್ ನ ಉಮಾನಾಥ ಸುವರ್ಣ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ರಾಮಲ್ ಕಟ್ಟೆ, ಕಳ್ಳಿಗೆ ಗ್ರಾಮ ಪಂಚಾಯತ್ ಸದಸ್ಯರು ರವಿರಾಜ್ ಜೈನ್ ಉಪಸ್ಥಿತರಿದ್ದರು.
ನಾರಾಯಣ ನಾಯ್ಕ ಅವರು ಅಧ್ಯಕ್ಷೀಯ ಮಾತನಾಡಿದರು. ದಕ್ಷ ಸ್ವರ ಪೂರ್ವ ವೃಕ್ಷ ಅವರು ಪ್ರಾರ್ಥನೆ ನೆರವೇರಿಸಿದರು. ಸೇವಾ ಟ್ರಸ್ಟಿ ಉಮೇಶ್ ರೆಂಜೋಡಿ ಸ್ವಾಗತ, ತಾರಾನಾಥ ಕೊಟ್ಟಾರಿ ಪ್ರಸ್ತಾವನೆ, ಕೇಶವ ನಾಯಕ ಕೇಪು ವಂದಿಸಿದರು. ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.







