ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಬಂಧನ

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಇತ್ತೀಚೆಗೆ ಪ್ರತಿಭಟನಾನಿರತ ರೈತರ ಮೇಲೆ ಕಾರನ್ನು ಹರಿಸಿ ನಾಲ್ವರ ಜೀವ ಬಲಿ ಪಡೆದಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾನನ್ನು ಸುದೀರ್ಘ ವಿಚಾರಣೆಯ ನಂತರ ಪೊಲೀಸರು ಬಂಧಿಸಿದ್ದಾರೆ ಎಂದು NDTV ವರದಿ ಮಾಡಿದೆ.
12 ಗಂಟೆಗೂ ಅಧಿಕ ಸಮಯ ನಡೆದ ವಿಚಾರಣೆಯ ವೇಳೆ ಆಶೀಶ್ ಮಿಶ್ರಾ 'ತಪ್ಪಿಸಿಕೊಳ್ಳುವ ಉತ್ತರ ನೀಡಿದ್ದ'. ಸರಿಯಾಗಿ ಸಹಕರಿಸಿಲ್ಲ ಎಂದು ವಿಶೇಷ ತನಿಖಾ ತಂಡದ(ಸಿಟ್)ಅಧಿಕಾರಿಗಳು ತಿಳಿಸಿದ್ದಾರೆ.
ಆಶಿಶ್ ಮಿಶ್ರಾ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ರಚಿಸಿದ ಅಪರಾಧ ವಿಭಾಗದ ವಿಶೇಷ ತನಿಖಾ ತಂಡದ(ಎಸ್ ಐಟಿ) ಮುಂದೆ ಶನಿವಾರ ಬೆಳಿಗ್ಗೆ 10: 40 ರ ಸುಮಾರಿಗೆ ಹಾಜರಾಗಿದ್ದಾನೆ.
ಹಿಂಸಾಚಾರ ಘಟನೆಯ ಬಳಿಕ ಉತ್ತರಪ್ರದೇಶ ಪೊಲೀಸರು ಆಶೀಶ್ ಮಿಶ್ರಾ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿದ್ದರು. ರೈತರ ಮೇಲೆ ಹರಿದಿರುವ ಎಸ್ ಯುವಿ ತನಗೆ ಸೇರಿದ್ದಾಗಿದೆ. ಆದರೆ ನಾನು ಅದರೊಳಗೆ ಇರಲಿಲ್ಲ ಎಂದು ಕೇಂದ್ರ ಸಚಿವನ ಪುತ್ರ ಹೇಳಿಕೊಂಡಿದ್ದ. ಉತ್ತರಪ್ರದೇಶ ಪೊಲೀಸ್ ಡಿಐಜಿ ಶುಕ್ರವಾರ ಆಶೀಶ್ ಗಾಗಿ ಮೂರು ಗಂಟೆ ಕಾದಿದ್ದರು. ಆದರೆ ಆತ ಹಾಜರಾಗಿರಲಿಲ್ಲ.