ಲಡಾಖ್ ಬಿಕ್ಕಟ್ಟು: ರವಿವಾರ ಭಾರತ-ಚೀನಾ ನಡುವೆ 13ನೇ ಸುತ್ತಿನ ಮಿಲಿಟರಿ ಮಾತುಕತೆ

ಹೊಸದಿಲ್ಲಿ, ಅ.9: ಉತ್ತರ ಲಡಾಖ್ ನಲ್ಲಿ ಕಳೆದ 17 ತಿಂಗಳುಗಳಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಭಾರತ ಮತ್ತು ಚೀನಾ ನಡುವೆ 13ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ರವಿವಾರ ಚುಷುಲ್-ಮೊಲ್ಡೋ ಗಡಿಯ ಚೀನಾದ ಭಾಗದಲ್ಲಿ ನಡೆಯಲಿವೆ.
14ನೇ ಕಾರ್ಪ್ಸ್ ನ ಕಮಾಂಡರ್ ಲೆ.ಜ.ಪಿಜಿಕೆ ಮೆನನ್ ಅವರು ಭಾರತೀಯ ನಿಯೋಗದ ನೇತೃತ್ವವನ್ನು ವಹಿಸಲಿದ್ದು,ರಾಜತಾಂತ್ರಿಕ ಪ್ರತಿನಿಧಿಯೋರ್ವರನ್ನೂ ನಿಯೋಗವು ಒಳಗೊಂಡಿರಲಿದೆ. ದಕ್ಷಿಣ ಶಿಂಜಿಯಾಂಗ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಮೇ.ಜ.ಜೆನ್ ಲಿಯು ಲಿನ್ ಅವರು ಚೀನಿ ನಿಯೋಗದ ನೇತೃತ್ವವನ್ನು ವಹಿಸಲಿದ್ದಾರೆ.
ಶನಿವಾರ ಇಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು,ಪೂರ್ವ ಲಡಾಖ್ ಗಡಿಯ ತನ್ನ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದು ಅದು ಅಲ್ಲಿಯೇ ತಳವೂರಲಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಹೇಳಿದರು.
ಉಭಯ ದೇಶಗಳು ಕಳೆದ ವರ್ಷ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಹೆಚ್ಚುವರಿ ಪಡೆಗಳು ಮತ್ತು ಮಿಲಿಟರಿ ಉಪಕರಣಗಳಿಗಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಪೂರ್ವ ಲಡಾಖ್ ನಲ್ಲಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿಯೂ ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯಲ್ಲಿನ ಸ್ಥಿತಿಯು ಉಂಟಾಗಬಹುದು ಎಂದು ನರವಾಣೆ ಕಳವಳ ವ್ಯಕ್ತಪಡಿಸಿದರು.





