ಎಲ್ಎಸಿಯಲ್ಲಿ ಚೀನಾದ ಉಪಸ್ಥಿತಿ ಮುಂದುವರಿದರೆ ನಮ್ಮ ಸೇನೆಯೂ ಅಲ್ಲಿರಲಿದೆ: ಜ.ಎಂ.ಎಂ.ನರವಾಣೆ
ಹೊಸದಿಲ್ಲಿ. 9: ಲಡಾಖ್ನಲ್ಲಿ ಗಡಿಯುದ್ದಕ್ಕೂ ಭಾರೀ ಪ್ರಮಾಣದಲ್ಲಿ ತನ್ನ ಮೂಲಸೌಕರ್ಯ ನಿರ್ಮಾಣವನ್ನು ಚೀನಿ ಸೇನೆಯು ಮುಂದುವರಿಸಿದರೆ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತೀಯ ಯೋಧರ ನಿಯೋಜನೆಯೂ ಮುಂದುವರಿಯಲಿದೆ ಎಂದು ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಶನಿವಾರ ಇಲ್ಲಿ ಹೇಳಿದರು.
ಇಂಡಿಯಾ ಟುಡೇ ಕಾನ್ ಕ್ಲೈವ್ ನಲ್ಲಿ ಮಾತನಾಡುತ್ತಿದ್ದ ಅವರು, ಗಡಿಯ ಚೀನಾದ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ,ಇದು ಅವರು ಅಲ್ಲಿಯೇ ಉಳಿಯಲಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ. ಅವರು ಅಲ್ಲಿಯೇ ಇದ್ದರೆ ನಾವೂ ಅಲ್ಲಿರುತ್ತೇವೆ. ನಮ್ಮ ಪ್ರದೇಶದಲ್ಲಿ ಮೂಲಸೌಕಯ ನಿರ್ಮಾಣ ಮತ್ತು ಅಭಿವೃದ್ಧಿ ಚೀನಿ ಸೇನೆ ಮಾಡಿರುವಷ್ಟೇ ಉತ್ತಮವಾಗಿದೆ ಎಂದರು.
ಎಲ್ಎಸಿಯಲ್ಲಿ ಚೀನಿ ಸೇನೆಯ ಉಪಸ್ಥಿತಿಯು ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯಲ್ಲಿರುವ ಸ್ಥಿತಿಯನ್ನು ಸೃಷ್ಟಿಸಬಹುದು ಎಂದ ನರವಾಣೆ, ಱಆದರೆ ಅವರು ಮತ್ತೊಮ್ಮೆ ದುಃಸ್ಸಾಹಸಕ್ಕಿಳಿಯದಂತೆ ನೋಡಿಕೊಳ್ಳಲು ನಾವೂ ಚೀನಿ ಸೇನೆಯ ಎಲ್ಲ ಚಟುವಟಿಕೆಗಳ ಮೇಲೆ ಖಂಡಿತವಾಗಿ ನಿಗಾಯಿರಿಸಬೇಕಾಗುತ್ತದೆ ೞಎಂದರು.
ಕಳೆದ ವರ್ಷದ ಜೂನ್ನಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ಪಡೆಗಳ ನಡುವೆ ಘರ್ಷಣೆಗಳ ಬಳಿಕ ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿವೆ.
ಉತ್ತರದ ಗಡಿಯಲ್ಲಿಯೂ ಚೀನಿ ಸೇನೆ ಶಿಷ್ಟಾಚಾರಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದ ನರವಾಣೆ, "ಇದರ ಅರ್ಥ ಅವರು ಅಲ್ಲಿಯೇ ಉಳಿಯಲಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮೇಲೆ ನಾವು ನಿಕಟ ನಿಗಾಯಿರಿಸಿದ್ದೇವೆ. ಆದರೆ ಅವರು ಅಲ್ಲಿಯೇ ಉಳಿದರೆ ನಾವೂ ಅಲಿಯೇ ಇರುತ್ತೇವೆ" ಎಂದರು.
"ಭಾರತೀಯ ಸೇನೆಯು ಬೇಹುಗಾರಿಕೆ,ಕಣ್ಗಾವಲು ಮತ್ತು ಪೂರ್ವೇಕ್ಷಣೆಯನ್ನು ಉತ್ತಮಗೊಳಿಸಿಕೊಳ್ಳಲು ಗಮನವನ್ನು ಕೆಂದ್ರೀಕರಿಸಬೇಕಿದೆ. ಇದು ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ನಮ್ಮ ಆಧುನೀಕರಣದ ಉದ್ದೇಶವಾಗಿದೆ. ಇದೇ ರೀತಿ ಭವಿಷ್ಯದಲ್ಲಿ ಅಗತ್ಯವಾಗುತ್ತವೆ ಎಂದು ನಾವು ಭಾವಿಸಿರುವ ಇತರ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳ ಖರೀದಿಯತ್ತಲೂ ನಾವು ಗಮನವನ್ನು ಹರಿಸಿದ್ದೇವೆ ಎಂದರು.







