ಲಖಿಂಪುರ ಖೇರಿ ಹಿಂಸಾಚಾರ ಪೂರ್ವ ಯೋಜಿತ ಸಂಚು: ರೈತರ ಆರೋಪ
ಹೊಸದಿಲ್ಲಿ, ಅ. 9: ಲಖಿಂಪುರ ಖೇರಿ ಹಿಂಸಾಚಾರ ಪೂರ್ವ ಯೋಜಿತ ಸಂಚು ಎಂದು ರೈತ ನಾಯಕರು ಶನಿವಾರ ಹೇಳಿದ್ದಾರೆ.
ಅಜಯ್ ಮಿಶ್ರಾ ಅವರು ಈ ಪಿತೂರಿ ಆರಂಭಿಸಿರುವುದರಿಂದ ಹಾಗೂ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿರುವುದರಿಂದ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಯೊಗೇಂದ್ರ ಯಾದವ್ (ಎಸ್ಕೆಎಂ) ಆಗ್ರಹಿಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ ಖಂಡಿಸಿ ದಸರಾ ಸಂದರ್ಭ ಅಕ್ಟೋಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಲಖಿಂಪುರ ಖೇರಿ ಘಟನೆ ಪೂರ್ವ ಯೋಜಿತ ಪಿತೂರಿಯ ಭಾಗ. ದಾಳಿಕೋರರು ರೈತರನ್ನು ಬೆದರಿಸಲು ಈ ರೀತಿ ಮಾಡಿದ್ದಾರೆ ಎಂದು ಎಸ್ಕೆಎಂನ ಪತ್ರಿಕಾಗೋಷ್ಠಿಯಲ್ಲಿದ್ದ ರೈತ ನಾಯಕ ದರ್ಶನ್ ಪಾಲ್ ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸರಕಾರ ಹಿಂಸಾತ್ಮಕ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಆದರೆ, ನಾವು ಹಿಂಸೆಯ ದಾರಿ ತುಳಿಯಲಾರೆವು ಎಂದು ಅವರು ಹೇಳಿದ್ದಾರೆ.