ಎಂಟು ನ್ಯಾಯಮೂರ್ತಿಗಳಿಗೆ ಪದೋನ್ನತಿ : ರಾಜ್ಯಕ್ಕೆ ಹೊಸ ಸಿಜೆ

ಹೊಸದಿಲ್ಲಿ: ಎಂಟು ಮಂದಿ ನ್ಯಾಯಮೂರ್ತಿಗಳಿಗೆ ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿ ಕಾನೂನು ಸಚಿವಾಲಯ ಶನಿವಾರ ಅಧಿಸೂಚನೆ ಹೊರಡಿಸಿದೆ. ಜತೆಗೆ ಐದು ಮಂದಿ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾಯಿಸಲಾಗಿದೆ.
ಕರ್ನಾಟಕದ ಹಂಗಾಮಿ ಸಿಜೆ ಆಗಿದ್ದ ಸತೀಶ್ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್ ಸಿಜೆ ಆಗಿ ವರ್ಗಾಯಿಸಲಾಗಿದೆ. ರಿತು ರಾಜ್ ಅವಸ್ಥಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನಿಯುಕ್ತರಾಗಿದ್ದಾರೆ.
ಕೊಲ್ಕತ್ತಾ ಹೈಕೋರ್ಟ್ ಹಂಗಾಮಿ ಸಿಜೆ ಆಗಿದ್ದ ರಾಜೇಶ್ ಬಿಂದಲ್ ಅಲಹಾಬಾದ್ ಹೈಕೋರ್ಟ್ ಸಿಜೆ ಆಗಿ ನೇಮಕಗೊಂಡಿದ್ದಾರೆ. ರಂಜೀತ್ ಮೋರೆ ಮೇಘಾಲಯ ಹೈಕೋರ್ಟ್ ಸಿಜೆ ಆಗಿ, ಪ್ರಕಾಶ್ ಶ್ರೀವಾಸ್ತವ ಅವರನ್ನು ಕೊಲ್ಕತ್ತಾ ಹೈಕೋರ್ಟ್ ಸಿಜೆ ಆಗಿ, ಹಿಮಾಚಲ ಪ್ರದೇಶದ ಹಂಗಾಮಿ ಸಿಜೆ ಆಗಿದ್ದ ಆರ್.ವಿ. ಮಳೀಮಠ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಸಿಜೆ ಆಗಿ, ಅರವಿಂದ್ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಸಿಜೆ ಆಗಿ ಮತ್ತು ಪ್ರಶಾಂತ್ ಮಿಶ್ರಾ ಅವರನ್ನು ಆಂಧ್ರಪ್ರದೇಶ ಸಿಜೆ ಆಗಿ ನಿಯೋಜಿಸಲಾಗಿದೆ.
ಕಾನೂನು ಸಚಿವಾಲಯ ಒಂದು ದಿನದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಜೆಗಳ ನೇಮಕ ಮಾಡಿರುವುದು ಇದೇ ಮೊದಲು. ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಖಿಲ್ ಖುರೇಷಿಯವರನ್ನು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿದೆ. ಖುರೇಷಿಯವರನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡುವ ಒಂಬತ್ತು ಮಂದಿಯ ಪಟ್ಟಿಯನ್ನು ಕೈಬಿಡಲಾಗಿತ್ತು. ಸುಪ್ರೀಂಕೋರ್ಟ್ ಕೊಲ್ಯಾಜಿಯಂ ಸೆಪ್ಟೆಂಬರ್ 17ರಂದು ಮಾಡಿದ ಶಿಫಾರಸ್ಸಿನ ಅನ್ವಯ ಈ ಪದೋನ್ನತಿ ನೀಡಲಾಗಿದೆ.
ದಾಖಲೆ ಅವಧಿಯಲ್ಲಿ ನೇಮಕಾತಿಯ ಎಲ್ಲ ಕಡತಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರದಲ್ಲಿ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಕೊಲ್ಯಾಜಿಯಂ ಒಂದೇ ಅಭಿಪ್ರಾಯ ಹೊಂದಿವೆ ಎಂದು ಹೇಳಿದ್ದಾರೆ.