ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ ಹಾಕಿದ ಆರೋಪ: 251 ರೂ.ಗಳ ಸ್ಮಾರ್ಟ್‌ಫೋನ್ ಹಗರಣದ ಆರೋಪಿಯ ಬಂಧನ

ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆಗೆ ಒಂದು ವರ್ಷ ಕಾಲ ಬೆದರಿಕೆ ಹಾಕಿದ ಆರೋಪದ ಮೇಲೆ ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ಬಂಧಿಸಿರುವ ಮೂವರಲ್ಲಿ 251 ರೂ.ಗಳ ಸ್ಮಾರ್ಟ್ ಫೋನ್ ಹಗರಣದ ಆರೋಪಿ ಕೂಡ ಸೇರಿದ್ದಾನೆ.
ಬಂಧಿತರಾದ ಮೋಹಿತ್ ಗೋಯೆಲ್, ಸುಮಿತ್ ಯಾದವ್ ಹಾಗೂ ವಿನಿತ್ ಸುಮಾರು 50 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಮೂವರು ಅತ್ಯಾಚಾರ ಆರೋಪಿ ವಿಕಾಸ್ ಮಿತ್ತಲ್ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದರು ಹಾಗೂ ವಿಕಾಸ್ ನಿಂದ ಅತ್ಯಚಾರಕ್ಕೊಳಗಾಗಿದ್ದ ಮಹಿಳೆಗೆ ಬೆದರಿಕೆ ಹಾಕಲು ನಿರ್ಧರಿಸಿದ್ದರು.
ಕಳೆದ ಆಗಸ್ಟ್ ನಲ್ಲಿ ದ್ವಾರಕಾದಲ್ಲಿ ಮಹಿಳೆಯೊಬ್ಬಳು ವಿಕಾಸ್ ಮಿತ್ತಲ್ ನಿಂದ ಅತ್ಯಾಚಾರಕ್ಕೊಳಗಾಗಿದ್ದಳು ಹಾಗೂ ಈ ಕುರಿತಾಗಿ ದೂರು ನೀಡಿದ್ದಳು. ಮಿತ್ತಲ್ ನನ್ನು ಐಜಿಐ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು. ಆದಾಗ್ಯೂ, ಅತ್ಯಾಚಾರ ಸಂತ್ರಸ್ತೆ ಗೆ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬರುತ್ತಿದ್ದವು. ಒಂದು ತಿಂಗಳ ನಂತರ, ಅಪರಿಚಿತ ವ್ಯಕ್ತಿ ಸಿವಿಲ್ ಲೈನ್ಸ್ ಮೆಟ್ರೋ ನಿಲ್ದಾಣದ ಬಳಿ ಸಂತ್ರಸ್ತೆಯನ್ನು ಹಿಡಿದು ಆಕೆಗೆ ಬೆದರಿಕೆ ಹಾಕಿದನೆನ್ನಲಾಗಿದೆ.
ಡಿಸೆಂಬರ್ 2020 ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿತು ಮತ್ತು ಮಹಿಳೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಸೂಚಿಸಿತು. ಬೆದರಿಕೆ ಕರೆಗಳ ಕುರಿತು ತನಿಖೆ ಆರಂಭಿಸಲಾಯಿತು ಹಾಗೂ ಶಂಕಿತರನ್ನು ಗುರುತಿಸಲಾಯಿತು. ಆದರೆ ಅವರು ಅಡಗುತಾಣಗಳನ್ನು ಬದಲಾಯಿಸುತ್ತಲೇ ಇದ್ದರು.
ಜೆಸಿಪಿ (ಅಪರಾಧ) ಅಲೋಕ್ ಕುಮಾರ್ ಅವರ ತಂಡವು ಮೊದಲು ಗುರ್ಗಾಂವ್ ನಿಂದ ವಿನಿತ್ (31) ನನ್ನು ಬಂಧಿಸಿತು. ಅತ್ಯಾಚಾರ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದ ಹಾಗೂ ತಾನು ಯಾದವ್ ಮತ್ತು ಗೋಯೆಲ್ ಜೊತೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಗೋಯೆಲ್ ನನ್ನು ನೋಯ್ಡಾ ಮತ್ತು ಯಾದವ್ ಅವರನ್ನು ಚಂಡೀಗಡದಿಂದ ಬಂಧಿಸಲಾಯಿತು.
ಗೋಯೆಲ್, ಮಿತ್ತಲ್ ನ ಸೋದರ ಮಾವ ಮತ್ತು ಆತನೊಂದಿಗೆ ವ್ಯಾಪಾರದಲ್ಲಿ ವಿವಾದ ಹೊಂದಿದ್ದ ಎನ್ನುವುದನ್ನು ವಿಚಾರಣೆಯ ವೇಳೆ ಪೊಲೀಸರು ಕಂಡುಕೊಂಡರು.
ದೇಶದ ಅಗ್ಗದ ಸ್ಮಾರ್ಟ್‌ಫೋನ್ ಹಗರಣದ ಹಿಂದೆ ಗೋಯೆಲ್ ಕೂಡ ಇದ್ದಾನೆ. ಆತ ರಿಂಗಿಂಗ್ ಬೆಲ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದ ಹಾಗೂ ಭಾರತ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಅಗ್ಗದ ದರದಲ್ಲಿ ಫ್ರೀಡಂ 251 ಎಂಬ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದ. ಆತ 48 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.