ರಾಹುಲ್ ಗಾಂಧಿ ಲಖಿಂಪುರ ಖೇರಿ ಭೇಟಿ ಕೇವಲ 'ರಾಜಕೀಯ ಪ್ರವಾಸ': ಕೇಂದ್ರ ಸಚಿವ ಗಿರಿರಾಜ್ ಸಿಂಗ್

photo: twitter
ಪಾಟ್ನಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಲಖಿಂಪುರ ಖೇರಿಗೆ ಭೇಟಿ ನೀಡಿರುವುದು ಕೇವಲ ರಾಜಕೀಯ ಪ್ರವಾಸಕ್ಕೊಂದು ಉದಾಹರಣೆಯಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಶನಿವಾರ ಟೀಕಿಸಿದ್ದಾರೆ.
ಅಕ್ಟೋಬರ್ 3 ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ.
"ರಾಹುಲ್ ಗಾಂಧಿಯವರು ಲಖಿಂಪುರ ಖೇರಿಗೆ ಭೇಟಿ ನೀಡಿರುವುದು ಕೇವಲ ರಾಜಕೀಯ ಟೂರಿಸಂನ ಒಂದು ಉದಾಹರಣೆಯಾಗಿದೆ. ಇದರಲ್ಲಿ ನಿಜವಾದ ಸಹಾನುಭೂತಿ ಹಾಗೂ ಅನುಕಂಪ ಇಲ್ಲ. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ರಾಜಕೀಯ ಪ್ರವಾಸೋದ್ಯಮವನ್ನು ಮುಂದುವರಿಸುತ್ತವೆ. ಆ ಘಟನೆಯಲ್ಲಿ ಹತ್ಯೆಗೀಡಾದ ಪತ್ರಕರ್ತರ ಕುಟುಂಬವನ್ನು ರಾಹುಲ್ ಗಾಂಧಿ ಭೇಟಿ ಮಾಡಲಿಲ್ಲವೇಕೆ? ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಕುಟುಂಬಗಳನ್ನು ಭೇಟಿ ಮಾಡಲು ಅವರು ಅಲ್ಲಿಗೆ ಏಕೆ ಭೇಟಿ ನೀಡಿಲ್ಲ? ಎಂದು ಕೇಳಲು ನಾನು ಬಯಸುವೆ'' ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಂಗ್ ಹೇಳಿದರು.
ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಿಯೋಗವು ಬುಧವಾರ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಮೃತ ರೈತ ಲವ್ಪ್ರೀತ್ ಸಿಂಗ್ ಅವರ ಕುಟುಂಬವನ್ನು ಭೇಟಿ ಮಾಡಿ ಸಮಾಧಾನಪಡಿಸಿತ್ತು.