ರೈತರ ಹೋರಾಟ ಬಿಂಬಿಸುವ ದುರ್ಗಾಪೂಜೆ ಪೆಂಡಾಲ್: ಆಯೋಜಕರಿಗೆ ಕಾನೂನು ನೋಟಿಸ್ ಜಾರಿ

Dibyangshu Sarkar/AFP
ಕೋಲ್ಕತಾ,ಅ.10: ಕೇಂದ್ರದ ನೂತನ ಕೃಷಿಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ವಿಷಯವನ್ನಾಗಿಟ್ಟುಕೊಂಡು ತಮ್ಮ ಮಂಟಪವನ್ನು ಅಲಂಕರಿಸಲು ಚಪ್ಪಲಿಗಳನ್ನು ಬಳಸಿ ‘ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಕ್ಕಾಗಿ ’ ಸ್ಥಳೀಯ ನ್ಯಾಯವಾದಿ ಪೃಥ್ವಿವಿಜಯ ದಾಸ್ ಅವರು ಕೋಲ್ಕತಾ ನಗರದ ಡಮ್ಡಮ್ ಪ್ರದೇಶದಲ್ಲಿನ ದುರ್ಗಾ ಪೂಜಾ ಸಮಿತಿಯ ಸಂಘಟಕರಿಗೆ ಕಾನೂನು ನೋಟಿಸನ್ನು ಕಳುಹಿಸಿದ್ದಾರೆ.
ಇದಕ್ಕೂ ಮುನ್ನ ಪ.ಬಂಗಾಳದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ಸದಸ್ಯರು ಮಂಟಪದಿಂದ ಚಪ್ಪಲಿಗಳನ್ನು ತೆರವುಗೊಳಿಸುವಂತೆ ಪ.ಬಂಗಾಳ ಸರಕಾರವನ್ನು ಆಗ್ರಹಿಸಿದ್ದರು. ಕಲಾ ಸ್ವಾತಂತ್ರದ ಹೆಸರಿನಲ್ಲಿ ಮಾತೆ ದುರ್ಗಾದೇವಿಯನ್ನು ಅವಮಾನಿಸುವ ಈ ಹೀನಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿ ಶನಿವಾರ ಟ್ವೀಟಿಸಿದ್ದರು.
ಈ ನಡುವೆ ಡಮ್ಡಮ್ ಭರತ ಚಕ್ರ ದುರ್ಗಾ ಪೂಜಾ ಸಮಿತಿಯ ಸದಸ್ಯರು ರೈತರ ಪ್ರತಿಭಟನೆಗಳ ಸಂಕೇತವಾಗಿ ಚಪ್ಪಲಿಗಳ ರಾಶಿಯನ್ನು ಕಲಾಕೃತಿಯ ರೂಪದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಚಪ್ಪಲಿಯ ರಾಶಿ ದೇವಿಯ ಮಂಟಪದಿಂದ ದೂರದಲ್ಲಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ. ತಾವು ಆಯ್ದುಕೊಂಡಿರುವ ಕಲಾಕೃತಿಯ ವಿಷಯವು ರೈತರ ಪ್ರತಿಭಟನೆಗಳು ಮತ್ತು ಉ.ಪ್ರದೇಶದ ಲಖಿಂಪುರ ಖೇರಿಯಲ್ಲಿ ಇತ್ತೀಚಿಗೆ ಸಂಭವಿಸಿದ್ದ ಹಿಂಸಾಚಾರಗಳ ಪ್ರಸ್ತಾಪಗಳನ್ನು ಒಳಗೊಂಡಿದೆ ಎಂದು ಸಮಿತಿಯ ಕಾರ್ಯದರ್ಶಿ ಪ್ರತೀಕ ಚೌಧರಿ ಹೇಳಿದ್ದಾರೆ.
ತಾನು ಸನಾತನಿ ಹಿಂದು ಆಗಿದ್ದು,ದುರ್ಗಾ ಪೂಜಾ ಮಂಟಪದಲ್ಲಿ ಚಪ್ಪಲಿಗಳ ಬಳಕೆಯನ್ನು ಸಹಿಸಿಕೊಳ್ಳಲು ತನಗೆ ಸಾಧ್ಯವಿಲ್ಲ ಎಂದು ತನ್ನ ನೋಟಿಸಿನಲ್ಲಿ ತಿಳಿಸಿರುವ ದಾಸ್,ಚಪ್ಪಲಿಗಳನ್ನು ತೆರವುಗೊಳಿಸದಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನೆಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಹಾಗೂ ತ್ರಿಪುರಾದ ಮಾಜಿ ರಾಜ್ಯಪಾಲ ತಥಾಗತ ರಾಯ್ ಅವರೂ ಮಂಟಪದ ಸಮೀಪ ಚಪ್ಪಲಿಗಳನ್ನು ಇರಿಸಿರುವುದು ಹಿಂದು ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.