ಕಲ್ಲಿದ್ದಲು ಕೊರತೆಯ ಕುರಿತು ಅನಗತ್ಯವಾಗಿ ಭೀತಿ ಸೃಷ್ಟಿ: ಕೇಂದ್ರ ಸಚಿವ ಆರ್.ಕೆ. ಸಿಂಗ್

ಹೊಸದಿಲ್ಲಿ: "ಕಲ್ಲಿದ್ದಲು ಕೊರತೆಯ ಬಗ್ಗೆ ಅನಗತ್ಯವಾಗಿ ಭೀತಿ ಸೃಷ್ಟಿಸಲಾಗಿದೆ ಗೈಲ್ ಹಾಗೂ ಟಾಟಾದ ತಪ್ಪು ಸಂವಹನವೇ ಇದಕ್ಕೆ ಕಾರಣ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಇಂದು ಹೇಳಿದ್ದಾರೆ.
ರಾಷ್ಟ್ರೀಯ ರಾಜಧಾನಿ ದಿಲ್ಲಿ ಸೇರಿದಂತೆ ಆರು ರಾಜ್ಯಗಳಲ್ಲಿ ವಿದ್ಯುತ್ ಪೂರೈಕೆಯ ಬಗ್ಗೆ ಭಾರೀ ಕಳವಳ ವ್ಯಕ್ತವಾಗಿರುವ ನಡುವೆ ಕೇಂದ್ರ ಸಚಿವರು ಈ ಹೇಳಿಕೆ ನೀಡಿದರು.
"ನಮ್ಮಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದೆ ... ನಾವು ಇಡೀ ದೇಶಕ್ಕೆ ವಿದ್ಯುತ್ ಪೂರೈಸುತ್ತಿದ್ದೇವೆ. ಯಾರು ಬೇಕಾದರೂ ನನಗೆ ವಿನಂತಿಯನ್ನು ನೀಡಿದರೂ ನಾನು ಅವರಿಗೆ ವಿದ್ಯುತ್ ಪೂರೈಸುತ್ತೇನೆ" ಎಂದು ಸಚಿವರು ಹೇಳಿದರು.
"ಭಯವನ್ನು ಅನಗತ್ಯವಾಗಿ ಸೃಷ್ಟಿಸಲಾಗಿದೆ ಹಾಗೂ ದೇಶಕ್ಕೆ ನಾಲ್ಕು ದಿನಗಳ ಮೀಸಲು ಇದೆ. ದಿಲ್ಲಿ ವಿದ್ಯುತ್ ಪೂರೈಕೆಯನ್ನು ಮುಂದುವರಿಸುತ್ತದೆ ಮತ್ತು ಲೋಡ್ ಶೆಡ್ಡಿಂಗ್ ಇರುವುದಿಲ್ಲ ... ದೇಶೀಯ ಅಥವಾ ಆಮದು ಮಾಡಿದ ಕಲ್ಲಿದ್ದಲು ಪೂರೈಕೆಯು ಶುಲ್ಕವನ್ನು ಲೆಕ್ಕಿಸದೆ ಮುಂದುವರಿಯುತ್ತದೆ. ಯಾವುದೇ ಸಂದರ್ಭದಲ್ಲಿ ಅನಿಲ ಪೂರೈಕೆ ಕಡಿಮೆಯಾಗುವುದಿಲ್ಲ" ಎಂದು ಅವರು ಹೇಳಿದರು.
ಗುಜರಾತ್, ಪಂಜಾಬ್, ರಾಜಸ್ಥಾನ, ದಿಲ್ಲಿ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಪಂಜಾಬ್ ಈಗಾಗಲೇ ಹಲವು ಸ್ಥಳಗಳಲ್ಲಿ ಸರದಿ ಲೋಡ್ ಶೆಡ್ಡಿಂಗ್ ವಿಧಿಸಿದೆ.







