ಟ್ವೆಂಟಿ-20 ವಿಶ್ವಕಪ್ ನಲ್ಲಿ ಮೊದಲ ಬಾರಿ ಬಳಕೆಯಾಗಲಿದೆ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ

photo: The indian express
ಹೊಸದಿಲ್ಲಿ: ಇದೇ ತಿಂಗಳು ಒಮಾನ್ ಹಾಗೂ ಯುಎಇನಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆಯನ್ನು(ಡಿಆರ್ಎಸ್)ಪರಿಚಯಿಸಲಾಗುವುದು. ಟೂರ್ನಮೆಂಟ್ ನಲ್ಲಿ ಡಿಆರ್ಎಸ್ ಬಳಕೆಗೆ ಐಸಿಸಿ ಅಸ್ತು ಎಂದಿದೆ.
ಪುರುಷರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರ ತನಕ ನಡೆಯಲಿದೆ.
ಇಎಸ್ಪಿಎನ್ ಕ್ರಿಕ್ ಇನ್ ಫೋ ವರದಿಯ ಪ್ರಕಾರ ಪ್ರತಿ ತಂಡವು ಒಂದು ಇನಿಂಗ್ಸ್ನಲ್ಲಿ ಗರಿಷ್ಠ ಎರಡು ಡಿಆರ್ಎಸ್ ಅನ್ನು ತೆಗೆದುಕೊಳ್ಳಬಹುದು.
ಕೋವಿಡ್-19ಗೆ ಸಂಬಂಧಿಸಿದ ಕಾರಣದಿಂದಾಗಿ ಕೆಲವೊಮ್ಮೆ ಪಂದ್ಯಗಳ ಸಂದರ್ಭದಲ್ಲಿ ಹೆಚ್ಚು ಅನುಭವ ಇಲ್ಲದ ಅಂಪೈರ್ಗಳು ಕರ್ತವ್ಯ ನಿರ್ವಹಿಸಬಹುದು ಎನ್ನುವುದನ್ನು ಗಮನದಲ್ಲಿರಿಸಿ ಎಲ್ಲ ಮಾದರಿಯ ಪಂದ್ಯಗಳಲ್ಲಿಯೂ ಡಿಆರ್ಎಸ್ ಪಡೆದುಕೊಳ್ಳುವ ಅವಕಾಶವನ್ನು ತಂಡಗಳಿಗೆ ನೀಡುವುದಾಗಿ ಕಳೆದ ವರ್ಷ ಜೂನ್ನಲ್ಲೇ ಐಸಿಸಿ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಸೀಮಿತ ಓವರ್ಗಳ ಪಂದ್ಯಗಳಲ್ಲಿ(ಏಕದಿನ ಹಾಗೂ ಟ್ವೆಂಟಿ-20)ಪ್ರತಿ ಇನಿಂಗ್ಸ್ಗೆ ಎರಡು ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಮೂರು ಡಿಆರ್ಎಸ್ ನೀಡಲಾಗುವುದು.
2016ರಲ್ಲಿ ನಡೆದಿದ್ದ ಪುರುಷರ ಟ್ವೆಂಟಿ-20 ವಿಶ್ವಕಪ್ನಲ್ಲಿ ಡಿಆರ್ಎಸ್ ಅನ್ನು ಬಳಕೆ ಮಾಡಿರಲಿಲ್ಲ. ಆದರೆ 2018ರಲ್ಲಿ ನಡೆದಿದ್ದ ಮಹಿಳಾ ಟಿ-20 ಟೂರ್ನಿಯಲ್ಲಿ ಡಿಆರ್ಎಸ್ ಬಳಸಲಾಗಿತ್ತು. ಐಸಿಸಿ ಅಂತರ್ರಾಷ್ಟ್ರೀಯ ಚುಟುಕು ಕ್ರಿಕೆಟ್ನಲ್ಲಿ ಈ ವ್ಯವಸ್ಥೆ ಬಳಕೆ ಮಾಡಿದ್ದು ಅದೇ ಮೊದಲು. ಆ ನಂತರ 2020ರಲ್ಲಿ ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆದಿದ್ದ ಮಹಿಳಾ ಟಿ-20 ಟೂರ್ನಿಯಲ್ಲಿಯೂ ಇದನ್ನು ಅಳವಡಿಸಲಾಗಿತ್ತು.