ಕಲ್ಲಿದ್ದಲು ಸಮಸ್ಯೆಯಿಲ್ಲ ಎಂದಿದ್ದ ಸರಕಾರ: ʼಅವರು ಆಕ್ಸಿಜನ್ ಕೊರತೆಯೂ ಇಲ್ಲವೆಂದು ಹೇಳಿದ್ದರುʼ ಎಂದ ಆಪ್
ಹೊಸದಿಲ್ಲಿ: ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆ ಎದುರಾಗಿದೆ ಎಂಬ ಹಲವು ವರದಿಗಳ ನಡುವೆ ಕೇಂದ್ರ ಸರಕಾರವು ವರದಿಗಳನ್ನು ತಳ್ಳಿ ಹಾಕಿತ್ತು. ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲು ನಮ್ಮಲ್ಲಿದೆ ಎಂದು ಹೇಳಿಕೆ ನೀಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ದಿಲ್ಲಿ ಉಪಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ, "ಅವರು ಆಕ್ಸಿಜನ್ ಕೊರತೆಯ ಸಂದರ್ಭದಲ್ಲೂ ಹೀಗೆಯೇ ಹೇಳಿದ್ದರು" ಎಂದಿದ್ದಾರೆ.
"ಕೋವಿಡ್ ನ ಎರಡನೇ ಅಲೆಯ ಸಂದರ್ಭದಲ್ಲಿ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಉಂಟಾಗಿತ್ತು. ʼಇಲ್ಲಿ ಯಾವುದೇ ಕೊರತೆಯಿಲ್ಲʼ ಎಂದೇ ಅವರು ಹೇಳುತ್ತಿದ್ದರು. ಇದೀಗ ಕಲ್ಲಿದ್ದಲು ಸಮಸ್ಯೆಯೂ ಕೂಡಾ ಅಂತಹದ್ದೇ" ಎಂದು ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ.
ಕೇಂದ್ರ ಇಂಧನ ಸಚಿವ ಆರ್‌ಕೆ ಸಿಂಗ್ ರ ಹೇಳಿಕೆಯನ್ನು ಖಂಡಿಸಿದ ಅವರು, "ರಾಜ್ಯದ ಮುಖ್ಯಮಂತ್ರಿಗಳು ಕಲ್ಲಿದ್ದಲು ಕೊರತೆಯ ಕುರಿತು ಕೇಂದ್ರ ಸರಕಾರವನ್ನು ಎಚ್ಚರಿಸುತ್ತಲೇ ಇದ್ದಾರೆ. ಈ ನಡುವೆ ಇವರ ಹೇಳಿಕೆಯು ಬೇಜವಾಬ್ದಾರಿಯುತವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.
ಗುಜರಾತ್, ಪಂಜಾಬ್, ರಾಜಸ್ಥಾನ, ದಿಲ್ಲಿ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ವಿದ್ಯುತ್ ತೊಂದರೆಯ ಕುರಿತಾದಂತೆ ಆತಂಕ ವ್ಯಕ್ತಪಡಿಸುತ್ತಿವೆ. ಈ ಕುರಿತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ದಿಲ್ಲಿಗೆ ವಿದ್ಯುತ್ ಸರಬರಾಜು ಮಾಡುವ ಸ್ಥಾವರಗಳನ್ನು ಪ್ರಾರಂಭಿಸಲು ನೆರವಾಗುವಂತೆ ಮನವಿ ಮಾಡಿದ್ದರು.