ಅಸ್ಸಾಂ ತೆರವು ಕಾರ್ಯಾಚರಣೆ: ದರಾಂಗ್ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

Photo: Twitter
ಗುವಾಹಟಿ,ಅ.10: ಅಸ್ಸಾಮಿನ ದರಾಂಗ್ ಜಿಲ್ಲೆಯ ಸಿಪಾಝಾರ್ ಪ್ರದೇಶದಲ್ಲಿ ಸೆ.23ರಂದು ನಡೆದಿದ್ದ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ಇಬ್ಬರು ಸ್ಥಳೀಯ ನಿವಾಸಿಗಳ ಕುಟುಂಬ ಸದಸ್ಯರು ದಾಖಲಿಸಿದ್ದ ದೂರುಗಳ ಮೇರೆಗೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದಲ್ಲಿ ಎರಡು ಎಫ್ಐಆರ್ಗಳು ದಾಖಲಾಗಿವೆ.
ಮನೆಗಳ ತೆರವು ಕಾರ್ಯಾಚರಣೆಯನ್ನು ಸ್ಥಳೀಯರು ಪ್ರತಿಭಟಿಸಿದ್ದು,ಈ ವೇಳೆ ಮೊಯಿನುಲ್ ಹಕ್ (33) ಮತ್ತು ಶೇಖ್ ಫರೀದ್ (12) ಪೋಲಿಸರ ಗುಂಡುಗಳಿಗೆ ಬಲಿಯಾಗಿದ್ದರು. ಘಟನೆ ನಡೆದ ಎರಡು ವಾರಗಳ ಬಳಿಕ ಅ.6 ಮತ್ತು 7ರಂದು ದೂರುಗಳನ್ನು ಸಲ್ಲಿಸಲಾಗಿತ್ತು.
ಮನೆಯನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಗೊಂಡಿತ್ತಾದ್ದರಿಂದ ಮೊಯಿನುಲ್ ತನ್ನ ಮನೆಯಲ್ಲಿದ್ದ ಸೊತ್ತುಗಳನ್ನು ಬೇರೆಡೆಗೆ ಸಾಗಿಸುತ್ತಿದ್ದರು. ಈ ವೇಳೆ ಯಾವುದೇ ಕಾರಣವಿಲ್ಲದೆ ಪೊಲೀಸರು ಗುಂಪಿನತ್ತ ಗುಂಡುಗಳನ್ನು ಹಾರಿಸಿದ್ದರಿಂದ ಗೊಂದಲದ ಸ್ಥಿತಿ ನಿರ್ಮಾಣಗೊಂಡಿತ್ತು. ಇದರಿಂದ ಕಕ್ಕಾಬಿಕ್ಕಿಯಾಗಿದ್ದ ಹಕ್ ಪೊಲೀಸರು ನಿಂತಿದ್ದ ಸ್ಥಳದ ಬಳಿ ಧಾವಿಸಿದ್ದರು. ಅವರನ್ನು ಹಿಡಿಯುವ ಬದಲು ಪೊಲೀಸರು ಗುಂಡು ಹಾರಿಸಿದ್ದು ಅವರ ಸಾವಿಗೆ ಕಾರಣವಾಯಿತು ಎಂದು ಸೋದರ ಸಂಬಂಧಿ ಐನುದ್ದೀನ್ ದೂರಿನಲ್ಲಿ ಹೇಳಿದ್ದಾರೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಕುಸಿದುಬಿದ್ದಿದ್ದ ಹಕ್ ಮೈಮೇಲೆ ಸರಕಾರಿ ಫೋಟೊಗ್ರಾಫರ್ ಬಿಜಯ ಬನಿಯಾ ಹತ್ತಿ ಕುಣಿದಿದ್ದನ್ನೂ ತನ್ನ ದೂರಿನಲ್ಲಿ ಉಲ್ಲೇಖಿಸಿರುವ ಐನುದ್ದೀನ್, ಈ ವೇಳೆ ದರಾಂಗ್ ಎಸ್ಪಿ ಮತ್ತು ಡಿಐಜಿ ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ. ಬನಿಯಾ ಹಕ್ ಮೈಮೇಲೆ ಹತ್ತಿ ಕುಣಿದಿದ್ದ, ಮುಷ್ಟಿಯಿಂದ ಗುದ್ದಿ ಕಾಲುಗಳಿಂದ ತುಳಿದಿದ್ದ ವೀಡಿಯೊ ವೈರಲ್ ಆದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ತನ್ನ ಸೋದರ ಆಧಾರ್ ಕಾರ್ಡ್ ತರಲು ಸ್ಥಳೀಯ ಅಂಚೆ ಕಚೇರಿಗೆ ತೆರಳುತ್ತಿದ್ದಾಗ ಪೊಲೀಸರ ಗುಂಡು ಬಡಿದು ಸಾವನ್ನಪ್ಪಿದ್ದಾನೆ ಎಂದು ಶೇಖ್ ಫರೀದ್ ನ ಹಿರಿಯ ಸೋದರ ಆಮಿರ್ ಹುಸೇನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯನ್ನು ಪ್ರತಿಭಟಿಸುತ್ತಿದ್ದ ಭಾರೀ ಸಂಖ್ಯೆಯ ಜನರು ಹಿಂಸಾಚಾರಕ್ಕಿಳಿದು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಬಳಿಕ ಗುಂಪನ್ನು ನಿಯಂತ್ರಿಸಲು ನಡೆಸಲಾದ ಗೋಲಿಬಾರ್ ನಲ್ಲಿ ಹಕ್ ಮತ್ತು ಫರೀದ್ ಕೊಲ್ಲಲ್ಪಟ್ಟಿದ್ದಾರೆ ಎಂದು ಸೆ,21ರಂದು ಹೆಚ್ಚುವರಿ ಎಸ್ಪಿ ಒಲಿಂದಿತಾ ಗೊಗೊಯಿ ಅವರು ದಾಖಲಿಸಿದ್ದ ಸಾಮಾನ್ಯ ಎಫ್ಐಆರ್ನಲ್ಲಿ ಹೇಳಿದ್ದರು.
ಮೃತರ ಕುಟುಂಬಗಳು ಹೆದರಿಕೊಂಡಿದ್ದರಿಂದ ಪೊಲೀಸರು ಮತ್ತು ಜಿಲ್ಲಾಡಳಿತದ ವಿರುದ್ಧ ದೂರುಗಳನ್ನು ದಾಖಲಿಸಲು ವಿಳಂಬವಾಗಿತ್ತು ಎಂದು ಸಂತ್ರಸ್ತರ ಪರ ವಕೀಲ ಸದ್ದಾಂ ಹುಸೇನ್ ತಿಳಿಸಿದರು. ಅಸ್ಸಾಂ ಪೊಲೀಸರು ಹಿಂಸಾಚಾರವನ್ನು ಪ್ರಚೋದಿಸಿದ್ದ ಆರೋಪದಲ್ಲಿ ಈವರೆಗೆ ಮೂವರನ್ನು ಬಂಧಿಸಿದ್ದಾರೆ.