ಐಪಿಎಲ್ ಕ್ವಾಲಿಫೈಯರ್-1: ಚೆನ್ನೈಗೆ 173 ರನ್ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

photo: twitter
ದುಬೈ, ಅ.10: ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ(60, 34 ಎಸೆತ)ಹಾಗೂ ನಾಯಕ ರಿಷಭ್ ಪಂತ್(ಔಟಾಗದೆ 51,35 ಎಸೆತ)ಅರ್ಧಶತಕಗಳ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ಕ್ವಾಲಿಫೈಯರ್-1 ಪಂದ್ಯವನ್ನು ಜಯಿಸಲು 173 ರನ್ ಗುರಿ ನೀಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ.
ಡೆಲ್ಲಿ 3.2 ಓವರ್ ಗಳಲ್ಲಿ 36 ರನ್ ಗಳಿಸುವಷ್ಟರಲ್ಲಿ ಶಿಖರ್ ಧವನ್ (7) ವಿಕೆಟನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್(1) ಹಾಗೂ ಅಕ್ಷರ್ ಪಟೇಲ್(10) ಕೂಡ ಬೇಗನೆ ಔಟಾದರು. ಪೃಥ್ವಿ ಶಾ (60 ರನ್, 34 ಎಸೆತ, 7 ಬೌಂಡರಿ, 3 ಸಿಕ್ಸರ್) ಅಗ್ರ ಸರದಿಯಲ್ಲಿ ತಂಡವನ್ನು ಆಧರಿಸಿದರು.
ಶಾ ಔಟಾದಾಗ ಡೆಲ್ಲಿ 80 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ಜೊತೆಯಾದ ಪಂತ್ (ಔಟಾಗದೆ 51, 35 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ಹೆಟ್ಮೆಯರ್(37, 24 ಎಸೆತ, 3 ಬೌಂಡರಿ, 1 ಸಿಕ್ಸರ್)5ನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಚೆನ್ನೈ ಪರ ವೇಗದ ಬೌಲರ್ ಹೇಝಲ್ ವುಡ್(2-29)ಎರಡು ವಿಕೆಟ್ ಪಡೆದರು. ರವೀಂದ್ರ ಜಡೇಜ, ಮೊಯಿನ್ ಅಲಿ ಹಾಗೂ ಡ್ವೆಯ್ನ್ ಬ್ರಾವೊ ತಲಾ ಒಂದು ವಿಕೆಟ್ ಪಡೆದರು.