ಐಪಿಎಲ್: ಡೆಲ್ಲಿಗೆ ಸೋಲುಣಿಸಿದ ಚೆನ್ನೈ ಫೈನಲ್ ಗೆ ಲಗ್ಗೆ

Photo: twitter.com/cricbuzz
ದುಬೈ, ಅ.10: ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಆರಂಭಿಕ ಬ್ಯಾಟ್ಸ್ ಮನ್ ಋತುರಾಜ್ ಗಾಯಕ್ವಾಡ್ (70, 50 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಹಿರಿಯ ಆಟಗಾರ ರಾಬಿನ್ ಉತ್ತಪ್ಪ(63, 44 ಎಸೆತ, 7 ಬೌಂಡರಿ, 2 ಸಿಕ್ಸರ್)ಎರಡನೇ ವಿಕೆಟ್ ಗೆ ಸೇರಿಸಿದ 110 ರನ್ ಜೊತೆಯಾಟದ ನೆರವಿನಿಂದ ಚೆನ್ನೈಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 4 ವಿಕೆಟ್ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 14ನೇ ಆವೃತ್ತಿಯ ಐಪಿಎಲ್ ಫೈನಲ್ ತಲುಪಿದೆ.
ರವಿವಾರ ನಡೆದ ಕ್ವಾಲಿಫೈಯರ್-1ರಲ್ಲಿ ಗೆಲ್ಲಲು 173 ರನ್ ಸವಾಲು ಪಡೆದ ಚೆನ್ನೈ 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಧೋನಿ ಬಳಗ 9ನೇ ಬಾರಿ ಐಪಿಎಲ್ ನಲ್ಲಿ ಫೈನಲ್ ತಲುಪಿದೆ.
ನಾಯಕ ಎಂಎಸ್ ಧೋನಿ(ಔಟಾಗದೆ 18)ಬೌಂಡರಿ ಬಾರಿಸುವ ಮೂಲಕ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಚೆನ್ನೈಗೆ ಕೊನೆಯ ಓವರ್ ನಲ್ಲಿ ಗೆಲುವಿಗೆ 13 ರನ್ ಅಗತ್ಯವಿತ್ತು. ಆಗ ಕ್ರೀಸ್ ನಲ್ಲಿದ್ದ ಧೋನಿ ಬೌಲರ್ ಟಾಮ್ ಕರನ್ ಎಸೆತದಲ್ಲಿ 3 ಬೌಂಡರಿ ಗಳಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.
ಲ್ಲಿ ಪರ ಟಾಮ್ ಕರನ್(3-29)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ(60, 34 ಎಸೆತ)ಹಾಗೂ ನಾಯಕ ರಿಷಭ್ ಪಂತ್(ಔಟಾಗದೆ 51,35 ಎಸೆತ)ಅರ್ಧಶತಕಗಳ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ಕ್ವಾಲಿಫೈಯರ್-1 ಪಂದ್ಯವನ್ನು ಜಯಿಸಲು 173 ರನ್ ಗುರಿ ನೀಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ.