ಖಾದ್ಯ ತೈಲಗಳ ಬೆಲೆಗಳನ್ನು ಇಳಿಸಲು ದಾಸ್ತಾನು ಮಿತಿಯನ್ನು ಹೇರಿದ ಕೇಂದ್ರ

ಹೊಸದಿಲ್ಲಿ,ಅ.10: ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯತೈಲಗಳ ಬೆಲೆಗಳನ್ನು ನಿಯಂತ್ರಿಸಿ ಬಳಕೆದಾರರಿಗೆ ನೆಮ್ಮದಿಯನ್ನು ನೀಡುವ ಪ್ರಯತ್ನವಾಗಿ ಕೇಂದ್ರ ಸರಕಾರವು ರವಿವಾರ ಆಮದುದಾರರು ಮತ್ತು ರಫ್ತುದಾರರನ್ನು ಹೊರತು ಪಡಿಸಿ ಯಾವುದೇ ವ್ಯಾಪಾರಿಗಳು ದಾಸ್ತಾನಿರಿಸುವ ಖಾದ್ಯತೈಲ ಮತ್ತು ಎಣ್ಣೆಬೀಜಗಳ ಪ್ರಮಾಣದ ಮೇಲೆ ಮಿತಿಯನ್ನು ಹೇರಿದೆ.
ಈಗಾಗಲೇ ಎನ್ಸಿಡಿಎಎಕ್ಸ್ನಲ್ಲಿ ಸಾಸಿವೆ ಎಣ್ಣೆಯ ವಾಯಿದಾ ವ್ಯವಹಾರವನ್ನು ಅ.8ರಿಂದ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರವು ತಿಳಿಸಿದೆ.
ಸರಕಾರದ ದತ್ತಾಂಶಗಳಂತೆ ಜಾಗತಿಕ ಕಾರಣಗಳು ಮತ್ತು ಸ್ಥಳೀಯ ಪೂರೈಕೆಯಲ್ಲಿ ಕೊರತೆಯಿಂದಾಗಿ ಕಳೆದೊಂದು ವರ್ಷದಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯತೈಲ ಬೆಲೆಗಳಲ್ಲಿ ಶೇ.46.15ರಷ್ಟು ತೀವ್ರ ಏರಿಕೆಯಾಗಿದೆ.
ಲಭ್ಯವಿರುವ ದಾಸ್ತಾನು ಮತ್ತು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯ ಪ್ರವೃತ್ತಿಯನ್ನು ಪರಿಗಣಿಸಿ ಖಾದ್ಯತೈಲಗಳ ದಾಸ್ತಾನಿನ ಮೇಲೆ ಮಿತಿಯನ್ನು ನಿರ್ಧರಿಸುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊರಡಿಸಿರುವ ಆದೇಶದಲ್ಲಿ ಸೂಚಿಸಿದೆ.
ಖಾದ್ಯತೈಲಗಳು ಮತ್ತು ಎಣ್ಣೆಬೀಜಗಳ ದಾಸ್ತಾನು ವಿವರಗಳು ನಿಯಮಿತವಾಗಿ ಘೋಷಣೆಯಾಗುವಂತೆ ಮತ್ತು ಕೇಂದ್ರದ ಪೋರ್ಟಲ್ನಲ್ಲಿ ಅಪ್ಡೇಟ್ ಆಗುವಂತೆ ನೋಡಿಕೊಳ್ಳಲು ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.