ದೇಶದ್ರೋಹ ಕಾನೂನು ವಜಾ ಮಾಡಿ : ಸುಪ್ರೀಂಗೆ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಆಗ್ರಹ

ರೋಹಿಂಟನ್ ನಾರಿಮನ್ (ಫೈಲ್ ಫೋಟೊ)
ಹೊಸದಿಲ್ಲಿ: ದೇಶದ್ರೋಹವನ್ನು ಅಪರಾಧ ಎಂದು ಪರಿಗಣಿಸುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ-1967ರ ಅಪರಾಧಕ್ಕೆ ಸಂಬಂಧಿಸಿದ ಅಂಶ ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಸುಪ್ರೀಂಕೋರ್ಟನ್ನು ಆಗ್ರಹಿಸಿದ್ದಾರೆ.
ಈ ಅಪರಾಧ ಕಾನೂನುಗಳನ್ನು ವಜಾ ಮಾಡುವ ಕೆಲಸವನ್ನು ಸರ್ಕಾರಕ್ಕೆ ಬಿಡದೇ ನ್ಯಾಯಾಂಗದ ಅಧಿಕಾರ ಬಳಸಿಕೊಂಡು ಕಾನೂನು ರದ್ದುಪಡಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ದೇಶದಲ್ಲಿ ದೇಶದ್ರೋಹ ಕಾನೂನು ವ್ಯಾಪಕವಾಗಿ ದುರ್ಬಳಕೆಯಾಗುತ್ತಿದ್ದು, ಸಾಮ್ರಾಜ್ಯಶಾಹಿ ಅವಧಿಯ ಕಾನೂನು ಈಗಲೂ ಅಗತ್ಯವಿದೆಯೇ ಎಂದು ಕಳೆದ ಜುಲೈ ತಿಂಗಳಲ್ಲಿ ಸುಪ್ರೀಂಕೋರ್ಟ್ ಅಚ್ಚರಿ ವ್ಯಕ್ತಪಡಿಸಿತ್ತು.
"ಬಾಕಿ ಇರುವ ದೇಶದ್ರೋಹ ಕಾನೂನು ಪ್ರಕರಣಗಳನ್ನು ಕೇಂದ್ರಕ್ಕೆ ವಾಪಾಸು ಕಳುಹಿಸದಂತೆ ನಾನು ಸುಪ್ರೀಂಕೋರ್ಟನ್ನು ಆಗ್ರಹಿಸುತ್ತಿದ್ದೇನೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ; ಆದರೆ ಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸಿ ಸೆಕ್ಷನ್ 124ಎ ಮತ್ತು ಯುಎಪಿಎ ಕಾನೂನಿನ ಅಪರಾಧಕ್ಕೆ ಸಂಬಂಧಿಸಿದ ಅಂಶವನ್ನು ಕಿತ್ತು ಹಾಕುವಂತೆ ಒತ್ತಾಯಿಸುತ್ತಿದ್ದೇನೆ. ಆಗ ನಾಗರಿಕರು ಸುಲಭವಾಗಿ ಉಸಿರಾಡಬಹುದು" ಎಂದು ನಾರಿಮನ್ ಹೇಳಿದ್ದಾರೆ.
ವಿಶ್ವನಾಥ್ ಪಸಾಯತ್ ಸ್ಮಾರಕ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ನಾರಿಮನ್ ಮಾತನಾಡಿದರು. ದೇಶದ್ರೋಹ ಎನ್ನುವುದು ಮೂಲ ಕರಡಿನ ಭಾಗವಾಗತ್ತು. ಆದರೆ ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆ ಸಿದ್ಧಪಡಿಸಿದ ಭಾರತೀಯ ದಂಡಸಂಹಿತೆಯ ಅಂತಿಮ ಪ್ರತಿಯ ಭಾಗವಾಗಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು. 1862ರಲ್ಲಿ ಈ ಕಾನೂನು ಜಾರಿಗೆ ಬಂದಿತ್ತು.