ಉತ್ತರಪ್ರದೇಶ ರೈತರಿಗೆ ಬೆಂಬಲ ಸೂಚಿಸಿ ಇಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ ಎಂವಿಎ ಸರಕಾರ
ರಸ್ತೆಗಿಳಿಯದ ಬಸ್, ಮುಂಬೈ ಪ್ರಯಾಣಿಕರ ಪರದಾಟ

ಹೊಸದಿಲ್ಲಿ: ಉತ್ತರಪ್ರದೇಶ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸಹಿತ 8 ಜನರು ಸಾವನ್ನಪ್ಪಿದ ಒಂದು ವಾರದ ನಂತರ ಮಹಾ ವಿಕಾಸ್ ಅಘಾಡಿ ಅಥವಾ ಎಂವಿಎ ಸರಕಾರವು ಉತ್ತರ ಪ್ರದೇಶದ ರೈತರಿಗೆ ಬೆಂಬಲ ಸೂಚಿಸಿ ಬಂದ್ ಕರೆ ನೀಡಿದ್ದು, ಬಸ್ ಗಳಿಲ್ಲದೆ ಮುಂಬೈ ಪ್ರಯಾಣಿಕರು ಸೋಮವಾರ ಬೆಳಗ್ಗೆ ಪರದಾಡಿದರು. ಲೋಕಲ್ ರೈಲುಗಳು ನಿಗದಿಯಂತೆ ಓಡಾಡುತ್ತಿದ್ದು, ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಾಗಿದೆ.
ಅಗತ್ಯವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಹೊರತುಪಡಿಸಿ ಎಲ್ಲ ಅಂಗಡಿಗಳು ಹಾಗೂ ಇತರ ವಾಣಿಜ್ಯ ಕಟ್ಟಡಗಳು ಬಂದ್ ಆಗಿವೆ.
ಶಿವಸೇನೆ, ಕಾಂಗ್ರೆಸ್ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಅಥವಾ ಎನ್‌ಸಿಪಿ ಒಳಗೊಂಡ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರಕಾರ ಬಂದ್‌ಗೆ ಬೆಂಬಲ ನೀಡುತ್ತಿದೆ. ವಾಸ್ತವವಾಗಿ, ರಾಜ್ಯ ಸರಕಾರವೇ ಮೂರು ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಂದ್ ಘೋಷಿಸಿತು.
"ನಾನು ಮಹಾರಾಷ್ಟ್ರದ 12 ಕೋಟಿ ಜನರಲ್ಲಿ ರೈತರನ್ನು ಬೆಂಬಲಿಸುವಂತೆ ವಿನಂತಿಸುತ್ತೇನೆ. ಬೆಂಬಲ ಎಂದರೆ ನೀವೆಲ್ಲರೂ ಬಂದ್‌ಗೆ ಸೇರಿಕೊಳ್ಳಿ ಹಾಗೂ ನಿಮ್ಮ ಕೆಲಸವನ್ನು ಒಂದು ದಿನ ನಿಲ್ಲಿಸಿ" ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ರವಿವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಮುಚ್ಚಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಸಬ್ಜಿ ಮಂಡಿ ಕೂಡ ಮುಚ್ಚಲಾಗಿದೆ. ಥಾಣೆಯಲ್ಲಿ ಶಿವಸೇನಾ ಕಾರ್ಯಕರ್ತರು ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದು ಹಾಗೂ ಆಟೋಗಳನ್ನು ಸ್ಥಗಿತಗೊಳಿಸಿದ ದೃಶ್ಯ ಕಂಡುಬಂದಿದೆ.
"ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ವಿರುದ್ಧ ಎಂವಿಎ ಸರಕಾರವು ಇಂದು ಬಂದ್ ಕರೆ ನೀಡಿದೆ. ಇದಕ್ಕೆ ಎಡ ಹಾಗೂ ಇತರ ಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಮಹಾರಾಷ್ಟ್ರದಾದ್ಯಂತ ಬಂದ್ ಶಾಂತಿಯುತವಾಗಿ ನಡೆಯುತ್ತಿದ್ದು, ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ಕಲ್ಲುತೂರಾಟ ನಡೆಸಿದ ವರದಿಯಾಗಿದೆ. ಯಾರೂ ಕೂಡ ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು…ನಾವು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ರಾಜೀನಾಮೆ ನೀಡಬೇಕೆಂದು ಹಾಗೂ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸುತ್ತೇವೆ'' ಎಂದು ರಾಜ್ಯ ಸಚಿವ ಹಾಗೂ ಎನ್ ಸಿಪಿ ಮುಖಂಡ ನವಾಬ್ ಮಲಿಕ್ ಸೋಮವಾರ ತಿಳಿಸಿದ್ದಾರೆ.
MVA's call for bandh today against killings in Lakhimpur Kheri (in UP) has received support from Left & some other parties and trade unions. The bandh is being observed peacefully across Maharashtra with widespread public support: State Minister & NCP leader Nawab Malik in Mumbai pic.twitter.com/h3rEq2c8HF
— ANI (@ANI) October 11, 2021