"ರಾಜಕಾರಣಿ ಎಂದ ಮಾತ್ರಕ್ಕೆ ಯಾರ ಮೇಲೆ ಬೇಕಾದರೂ ಫಾರ್ಚೂನರ್ ಕಾರು ಹರಿಸಬಹುದು ಎಂದರ್ಥವಲ್ಲ": ಉ.ಪ್ರ ಬಿಜೆಪಿ ಅಧ್ಯಕ್ಷ

ಲಕ್ನೋ : ರಾಜಕೀಯ ನಾಯಕರಾಗಿದ್ದಾರೆಂಬ ಕಾರಣಕ್ಕೆ ಒಬ್ಬರು ಫಾರ್ಚೂನರ್ ಕಾರನ್ನು ಯಾರ ಮೇಲೆ ಬೇಕಾದರೂ ಹರಿಸಬಹುದು ಎಂದು ಅರ್ಥವಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಳೆ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ಅವರ ಪುತ್ರ ಆಶಿಷ್ ಮಿಶ್ರಾ ತಮ್ಮ ಕಾರನ್ನು ಹರಿಸಿದ್ದಾರೆಂಬ ಆರೋಪಗಳ ನಡುವೆ ಸಿಂಗ್ ಅವರ ಹೇಳಿಕೆ ಬಂದಿದೆ.
ಲಕ್ನೋದಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.
"ಚುನಾವಣೆಗಳನ್ನು ಒಬ್ಬ ವ್ಯಕ್ತಿಯ ಗುಣ ನಡತೆಗಳ ಆಧಾರದಲ್ಲಿ ಗೆಲ್ಲಬೇಕು, ರಾಜಕಾರಣವೆಂದರೆ ಸಮಾಜಕ್ಕೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿದೆ. ಇಲ್ಲಿ ಜಾತಿ, ಧರ್ಮದ ಪ್ರಶ್ನೆಯಿಲ್ಲ. ರಾಜಕೀಯ ನಾಯಕರೆಂದ ಮಾತ್ರಕ್ಕೆ ನೀವು ಲೂಟಿ ಮಾಡಬಹುದು ಹಾಗೂ ಯಾರ ಮೇಲೆ ಬೇಕಾದರೂ ಫಾರ್ಚೂನರ್ ಅನ್ನು ಹರಿಸಬಹುದು ಎಂಬರ್ಥವಲ್ಲ. ನಾವು ಬಡವರ ಸೇವೆಗೆಂದು ಪಕ್ಷದಲ್ಲಿದ್ದೇವೆ. ರಾಜಕೀಯ ಒಂದು ಪಾರ್ಟ್-ಟೈಮ್ ಉದ್ಯೋಗವಲ್ಲ" ಎಂದು ಸಿಂಗ್ ಹೇಳಿದರು.
"ಬಡ ಹಿನ್ನೆಲೆಯ ಇಬ್ಬರು ದೇಶದ ಪ್ರಧಾನಿ ಹಾಗೂ ಉತ್ತರ ಪ್ರದೇಶ ಸೀಎಂ ಆಗಿದ್ದಾರೆ. ಪ್ರಧಾನಿ ಮೋದಿ ಬಡವರಿಗೆ ಬ್ಯಾಂಕ್ ಖಾತೆಗಳನ್ನು ತೆರೆದರು. ಮೋದಿ ಹಾಗೂ ಸೀಎಂ ಯೋಗಿ ಲಕ್ಷಾಂತರ ಜನರಿಗೆ ರಾಜ್ಯದಲ್ಲಿ ಮನೆಗಳನ್ನು ನಿರ್ಮಿಸಿದರು. ಯಾರಾದರೂ ಮತಗಳು ಹಾಗೂ ಧರ್ಮದ ಬಗ್ಗೆ ಕೇಳಿದ್ದಾರೆಯೇ?" ಎಂದು ಅವರು ಪ್ರಶ್ನಿಸಿದರು.