ಹಳ್ಳಾಡಿಯಲ್ಲಿ ಮತಾಂತರ ಯತ್ನ ಆರೋಪ: ಮಹಿಳೆ ಸೇರಿ ನಾಲ್ವರ ಬಂಧನ

ಕೋಟ, ಅ.11: ಶಿರಿಯಾರ ಸಮೀಪದ ಹಳ್ಳಾಡಿ ಎಂಬಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಮಹಿಳೆ ಸೇರಿದಂತೆ ನಾಲ್ವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಹಳ್ಳಾಡಿ ಮುಕ್ಲಾಟಿಕೆಯ ಜ್ಯೋತಿ, ಪ್ರಕಾಶ, ಮನೋಹರ್ ಹಾಗೂ ರವಿ ಬಂಧಿತ ಆರೋಪಿಗಳು.
ಆರೋಪಿಗಳನ್ನು ಕೋಟ ಪೊಲೀಸರು ಇಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಅ.10ರಂದು ಸಂಜೆ ವೇಳೆ ಸಾಬರಕಟ್ಟೆ ಮಂಜರಬೆಟ್ಟುವಿನ ಆನಂದ ಹಾಗೂ ಅವರ ಸ್ನೇಹಿತ ಶರಣ್ ಎಂಬವರನ್ನು ಆನಂದ ಅವರ ಸಂಬಂಧಿಯಾಗಿರುವ ರವಿ, ಮುಕ್ಲಾಟಿಕೆಯ ಜ್ಯೋತಿ ಮನೆಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಮನೆಯಲ್ಲಿದ್ದ ಜ್ಯೋತಿ, ಪ್ರಕಾಶ, ಮನೋಹರ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರೇರೆಪಿಸಿರುವುದಾಗಿ ದೂರಲಾಗಿದೆ.
ಧರ್ಮಗಳ ಮಧ್ಯೆ ದ್ವೇಷವನ್ನುಂಟು ಮಾಡುವ ಮತ್ತು ಸೌರ್ಹಾದತೆಗೆ ಧಕ್ಕೆ ಮಾಡುವ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಆರೋಪಿಗಳು ನಮ್ಮನ್ನು ಮನೆಗೆ ಕರೆದು ಮತಾಂತರ ಮಾಡಲು ಪ್ರೇರೆಪಿಸಿರುವುದಾಗಿ ಆನಂದ ನೀಡಿದ ದೂರಿನಂತೆ ಕೋಟ ಪೊಲೀಸರು ಕಲಂ: 153 (ಅ), 295(ಅ), 298 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.





