ಮಂಗಳೂರು: ‘ಅರಿವು ಸಾಲ ಯೋಜನೆ’ ಹಿಂದಿನಂತೆಯೇ ಮುಂದುವರಿಸಲು ಜಿಐಒ ಒತ್ತಾಯ

ಮಂಗಳೂರು, ಅ.11: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಅರಿವು ಸಾಲ ಯೋಜನೆ ಹೊಸ ಆದೇಶದ ಲೋಪದೋಷಗಳನ್ನು ಬಗೆಹರಿಸಿ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಗರ್ಲ್ಸ್ ಇಸ್ಲಾಮಿಕ್ ಸಂಘಟನೆಯ ದ.ಕ. ಜಿಲ್ಲಾ ಘಟಕ (ಜಿಐಒ) ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಜಿಐಒ ದ.ಕ. ಜಿಲ್ಲಾ ಘಟಕದ ಸಂಚಾಲಕಿ ಹಾಗೂ ರಾಜ್ಯ ಸಲಹಾ ಸಮಿತಿಯ ಸದಸ್ಯೆ ಡಾ. ಆಯಿಶಾ ಫಿದಾ ಮಾತನಾಡಿ, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೇ ಫಲಾನುಭವಿಗಳಾಗಿರುವ ಈ ಯೋಜನೆಯನ್ನು ಪುನ:ಸ್ಥಾಪಿಸುವ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜತೆಗೆ ಅವರ ಹೆತ್ತವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಎಂಡಿಸಿಯಡಿ ನೀಡಲಾಗುವ ಅರಿವು ಸಾಲ ಯೋಜನೆಯಡಿ ರಾಜ್ಯಾದ್ಯಂತ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಬೀದರ್ ಜಿಲ್ಲೆಯೊಂದರಲ್ಲೇ ಸುಮಾರು 2900 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಕೊರೋನ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಈ ಸಾಲಕ್ಕಾಗಿ ಅನುದಾನ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದ್ದಾಗ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರನ್ನು ಭೇಟಿ ಮಾಡಿ ಯೋಜನೆಯನ್ನು ಮರುಸ್ಥಾಪಿಸಲು ಜಿಐಓದಿಂದ ಒತ್ತಾಯಿಸಲಾಗಿತ್ತು. ಅದರಂತೆ ಇದೀಗ ಹೊಸತಾಗಿ ಸಾಲ ಯೋಜನೆಗೆ ಆದೇಶ ಮಾಡಲಾಗಿದೆ. ಆದರೆ ಅದರಲ್ಲಿನ ಕೆಲವೊಂದು ದೋಷಗಳು ಅಲ್ಪಸಂಖ್ಯಾತ ವಿದ್ಯಾರ್ಥಿ ಸಮುದಾಯಕ್ಕೆ ತೊಂದರೆಯಾಗಿ ಪರಿಣಮಿಸಿದೆ ಎಂದವರು ಹೇಳಿದರು.
ಹೊಸ ಸಾಲದ ಅರ್ಜಿಯ ಪ್ರಕ್ರಿಯೆಯಲ್ಲಿ ವಿಧಿಸಲಾಗಿರುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಅಥವಾ ನೀಟ್ ಪರೀಕ್ಷೆಗಳ ಮೂಲಕ ಸರಕಾರಿ ಕೋಟಾದಡಿ ಖಾಸಗಿ ಅಥವಾ ಸರಕಾರಿ ಕಾಲೇಜುಗಳಿಗೆ ಆಯ್ಕೆಯಾದವರಿಗೆ ಮಾತ್ರ ಶಿಕ್ಷಣ ಸಾಲ ಮಂಜೂರಾಗುತ್ತದೆ. ಇದರಿಂದ ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ಪಜೆದ ವಿದ್ಯಾರ್ಥಿಗಳು ಈ ಯೋಜನೆಯಿಂದ ವಂಚಿತರಾಗುವಂತಾಗಿದೆ. ಹಿಂದೆ ನಿಯಮದಂತೆ ವಿದ್ಯಾರ್ಥಿಗಳು ಖಾಸಗಿಯಾಗಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದೀಗ ಅರ್ಜಿದಾರರು ಸಾಲಕ್ಕಾಗಿ ಅವರ ಕಾಲೇಜು ಅಥವಾ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸುವಂತೆ ಆದೇಶಿಸುವ ಮೂಲಕ ಸರಕಾರ ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕವನ್ನು ಕಸಿಯಲಾಗಿದೆ. ಸಾಲದ ಅರ್ಜಿಗಳನ್ನು ತಮ್ಮ ಕೋರ್ಸ್‌ನ ಮೊದಲ ವರ್ಷದಲ್ಲಿ ಸಲ್ಲಿಸಿದರೆ ಮಾತ್ರ ಸ್ವೀಕರಿಸಲಾಗುತ್ತದೆ ಎಂಬ ಅಂಶ ಕೂಡಾ ಅಸಂಬದ್ಧ ಎಂದು ಅವರು ಹೇಳಿದರು.
ಅರಿವು ಸಾಲದ ಮಂಜೂರಾತಿಯನ್ನು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ತಡೆ ಹಿಡಿದಿರುವುದರಿಂದ ಈಗಾಗಲೇ ಸಾಲ ಪಡೆದು ಶಿಕ್ಷಣ ಆರಂಭಿಸಿರುವವರು ದ್ವಿತೀಯ ಅಥವಾ ತಮ್ಮ ಮುಂದಿನ ವರ್ಷದ ಕಲಿಕೆಗಾಗಿ ಸಾಲದಿಂದ ವಂಚಿತರಾಗಿದ್ದಾರೆ. ಅರಿವು ಸಾಲ ಯೋಜನೆಯ ಆಶ್ವಾಸನೆಯಲ್ಲಿ ವೈದ್ಯಕೀಯ ಸೇರಿದಂತೆ ಹಲವಾರು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿದ ವಿದ್ಯಾರ್ಥಿಗಳ ಪೋಷಕರು ಇದೀಗ ಶುಲ್ಕ ತೆರಲಾಗಿದೆ ಚಿನ್ನ ಅಡವಿಟ್ಟು, ಖಾಸಗಿಯವರಿಂದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ 2019ರಿಂದ ಸಾಲದ ಅರ್ಜಿದಾರರಿಗೆ ಸರಕಾರ ಸರಿಯಾದ ಮೊತ್ತವನ್ನು ನೀಡಿ ಸಾಲ ಮರು ಪಾವತಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಸಹ ಸಂಚಾಲಕಿ ಹಿಬಾ ಫಾತಿಮಾ ಒತ್ತಾಯಿಸಿದರು.
ಯುಜಿಸಿ ಎನ್‌ಇಟಿ ಪರೀಕ್ಷೆಯ ಪ್ರವೇಶ ಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆಯಲ್ಲದೆ, ವಿದ್ಯಾರ್ಥಿಗಳಿಗೆ ಖಾಸಗಿ ಬಸ್ಸುಗಳಲ್ಲಿ ಕಡಿಮೆ ಶುಲ್ಕದಲ್ಲಿ ಹಾಗೂ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಐಓ ಉಳ್ಳಾಲ ಶಾಖೆಯ ಸ್ಥಾನೀಯ ಅಧ್ಯಕ್ಷೆ ಫಾತಿಮಾ ಅಂಜುಮ್ ಹಾಗೂ ಕಾರ್ಯದರ್ಶಿ ಆಶಿಯ ನಜ್‌ಫತ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಐಓ ಮಂಗಳೂರು ಶಾಖೆಯ ಸ್ಥಾನೀಯ ಅಧ್ಯಕ್ಷೆ ಹನೀಫಾ ತ್ವೊಬೀಬ ಉಪಸ್ಥಿತರಿದ್ದರು.










