ಮುಂಬೈ ಡ್ರಗ್ಸ್ ಪ್ರಕರಣ:ಬುಧವಾರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ

ಹೊಸದಿಲ್ಲಿ: ಆರ್ಯನ್ ಖಾನ್ ಜಾಮೀನು ಅರ್ಜಿಯ ಕುರಿತು ಬುಧವಾರದೊಳಗೆ ಉತ್ತರ ಸಲ್ಲಿಸುವಂತೆ ಮುಂಬೈ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ(ಎನ್ ಸಿಬಿ) ಮುಂಬೈ ಕೋರ್ಟ್ ಸೂಚಿಸಿದೆ.
ಬುಧವಾರ ಬೆಳಿಗ್ಗೆ 11 ಗಂಟೆಯೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ಎನ್‌ಸಿಬಿಗೆ ಸೂಚಿಸಲಾಗಿದ್ದರೂ, ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯು ಅದೇ ದಿನ ಮಧ್ಯಾಹ್ನ 2.45 ಕ್ಕೆ ನಡೆಯಲಿದೆ ಎಂದು ಆರ್ಯನ್ ಖಾನ್ ಅವರ ವಕೀಲ ಸತೀಶ್ ಮಾನೆಶಿಂಧೆ ಸೋಮವಾರ ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಕ್ರೂಸ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಪ್ರಕರಣದ ಮುಂದಿನ ವಿಚಾರಣೆಯವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ.
ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿತ್ತು. ಇಂದಿನ ವಿಚಾರಣೆ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆಯ ಸಮಯದಲ್ಲಿ, ಆರ್ಯನ್ ಖಾನ್ ಅವರ ವಕೀಲ ಅಮಿತ್ ದೇಸಾಯಿ ಅವರು ಎನ್‌ಸಿಬಿ ತನ್ನ ಉತ್ತರವನ್ನು ಸೋಮವಾರ ಮಧ್ಯಾಹ್ನದೊಳಗೆ ಅಥವಾ ಮಂಗಳವಾರದೊಳಗೆ ಸಲ್ಲಿಸಬೇಕು. ಇದರಿಂದ ವಿಚಾರಣೆಯು ಆದಷ್ಟು ಬೇಗನೆ ನಡೆಯುತ್ತದೆ. ಆದಾಗ್ಯೂ, ತನಿಖಾ ಸಂಸ್ಥೆ ವರದಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ಕೋರಿತು.







