ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದು ಹಣ ಹಿಂದಿರುಗಿಸಿದ ಅಮಿತಾಭ್ ಬಚ್ಚನ್

ಮುಂಬೈ: ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪಾನ್ ಮಸಾಲ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ತಮ್ಮ ಒಪ್ಪಂದವನ್ನು ಅಂತ್ಯಗೊಳಿಸಿದ್ದಾರೆ. ಈ ನಿರ್ದಿಷ್ಟ ಜಾಹೀರಾತು ಪ್ರಸಾರಗೊಂಡ ಕೆಲವೇ ದಿನಗಳಲ್ಲಿ ಅಮಿತಾಭ್ ಈ ನಿರ್ಧಾರ ಕೈಗೊಂಡಿದ್ದಾರೆ. ರಾಷ್ಟ್ರ ಮಟ್ಟದ ತಂಬಾಕು ವಿರೋಧಿ ಸಂಘಟನೆಯೊಂದು ಅಮಿತಾಭ್ ಅವರಿಗೆ ಪಾನ್ ಮಸಾಲ ಉತ್ಪನ್ನ ಬಳಕೆಯನ್ನು ಪ್ರೋತ್ಸಾಹಿಸದಂತೆ ಮನವಿ ಮಾಡಿಕೊಂಡ ನಂತರ ಬಿಗ್ ಬಿ ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಸಂಘಟನೆ ಮಾತ್ರವಲ್ಲದೆ ಅಮಿತಾಭ್ ಅವರ ಹಲವು ಅಭಿಮಾನಿಗಳು ಕೂಡ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದನ್ನು ಪ್ರಶ್ನಿಸಿದ್ದರು.
ಅವರು ಈ ಜಾಹೀರಾತಿನಿಂದ ಹಾಗೂ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ, ಎಂದು ಅಮಿತಾಭ್ ಅವರ ತಂಡದಿಂದ ಬಿಡುಗಡೆಯಾದ ಅಧಿಕೃತ ಹೇಳಿಕೆ ತಿಳಿಸಿದೆಯಲ್ಲದೆ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ನಿಷೇಧಿತ ಉತ್ಪನ್ನಗಳ ಜಾಹೀರಾತಿನ ವಿಭಾಗದಲ್ಲಿ ಅದು ಬರುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂಬ ವಿವರಣೆಯನ್ನೂ ನೀಡಲಾಗಿದೆ. "ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಒಪ್ಪಂದ ಅಂತ್ಯಗೊಳಿಸಿ ಪಡೆದುಕೊಂಡಿರುವ ಹಣವನ್ನೂ ವಾಪಸ್ ನೀಡಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.





