ರೈತರ ಹತ್ಯೆ ಪ್ರಕರಣ: ಸಚಿವರ ಪುತ್ರನಿಗೆ 3 ದಿನಗಳ ಪೊಲೀಸ್ ಕಸ್ಟಡಿ

Credit: Twitter/@PJkanojia
ಲಕ್ನೊ: ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ ಕೊಲೆಗೈದ ಆರೋಪದ ಮೇಲೆ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾನನ್ನು ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಆಶಿಶ್ ಮಿಶ್ರಾನನ್ನು ಷರತ್ತುಗಳೊಂದಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಅಡ್ವೋಕೇಟ್ ಎಸ್.ಪಿ.ಯಾದವ್ ಹೇಳಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನನ್ನು ಲಖಿಂಪುರ ಖೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಶನಿವಾರ ಬಂಧಿಸಲಾಗಿತ್ತು. ಆತ ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾನೆ ಹಾಗೂ ತನಿಖೆಗೆ ಸಹಕರಿಸಲಿಲ್ಲ ಎಂದು ಪೊಲೀಸರು ಹೇಳಿದ್ದರು.
ಆಶೀಶ್ ನನ್ನು ಕೊಲೆ ಪ್ರಕರಣದಲ್ಲಿ ಹೆಸರಿಸಿದ ಐದು ದಿನಗಳ ನಂತರ ಬಂಧಿಸಲಾಗಿತ್ತು. ಆತನ ವಿರುದ್ಧದ ಆರೋಪಗಳು ಸಾಮಾನ್ಯವಾಗಿ ತಕ್ಷಣದ ಬಂಧನಕ್ಕೆ ಅರ್ಹವಾಗಿರುತ್ತವೆ. ಆದರೆ ಆತನ ತಂದೆಯಿಂದಾಗಿ ಆಶೀಶ್ ಗೆ ವಿಐಪಿ ಆತಿಥ್ಯ ನೀಡಲಾಗಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.





