ರಾಷ್ಟ್ರ ರಾಜಕಾರಣದ ವಿಚಾರವೇ ಚರ್ಚೆಯಾಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಅ. 11: `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇತ್ತೀಚೆಗೆ ಭೇಟಿಯಾದಾಗ ರಾಷ್ಟ್ರ ರಾಜಕಾರಣದ ವಿಷಯ ಚರ್ಚೆಗೆ ಬಂದಿಲ್ಲ. ಆದರೂ, ಕೆಲ ಪತ್ರಿಕೆಗಳಲ್ಲಿ ಕಲ್ಪಿತ ವರದಿಗಳು ಪ್ರಸಾರವಾಗುತ್ತಿವೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, `ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ನನಗೆ ಆಹ್ವಾನವನ್ನೇ ನೀಡಿಲ್ಲ. ಆ ವಿಷಯದ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಆದರೂ, ಅವರಿಗೆ ಈ ವಿಷಯದ ಬಗ್ಗೆ ಬೇಜಾರಾಗಿದೆ ಎಂದರೆ ಯಾವ ರೀತಿ ಸ್ಪಷ್ಟನೆ ಕೊಡಬೇಕು? ಎಂದು ಪ್ರಶ್ನೆ ಮಾಡಿದರು.
`ವಿಷಯ ಚರ್ಚೆಯಾಗಿದ್ದರೆ ತಾನೇ ಮನಸ್ತಾಪದ ಪ್ರಶ್ನೆ ಮೂಡುವುದು? ಇಷ್ಟು ಸ್ಪಷ್ಟವಾಗಿ ಹೇಳಿದ್ದರೂ ಪತ್ರಿಕೆಗಳಲ್ಲಿ ಈ ವಿಚಾರದ ಬಗ್ಗೆ ಕಲ್ಪಿತ ವರದಿಗಳು ಬರುತ್ತಿವೆ ಎಂದರೆ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಮರೆತಿವೆ ಎಂಬುದಾಗಿ ಹೇಳಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಕೆಲ ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.





