"ದೇಶದ್ರೋಹ ಕಾನೂನು ರದ್ದುಗೊಳಿಸಬೇಕು, ಯುಎಪಿಎಯ ಕೆಲ ಭಾಗಗಳನ್ನು ರದ್ದುಗೊಳಿಸಬೇಕು"
ಮಾಜಿ ಸುಪ್ರೀಂ ನ್ಯಾಯಾಧೀಶ ನಾರಿಮನ್

photo: twitter.com/barandbench
ಹೊಸದಿಲ್ಲಿ: ದೇಶದ್ರೋಹದ ಕಾನೂನನ್ನು ಹಾಗೂ ಅಕ್ರಮ ಚಟುವಟಿಕೆಗಳ(ನಿಯಂತ್ರಣ) ಕಾಯಿದೆಯ ಕೆಲವೊಂದು "ಆಕ್ಷೇಪಾರ್ಹ ಭಾಗಗಳನ್ನು" ಸುಪ್ರೀಂ ಕೋರ್ಟ್ ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ರೋಹಿಂಟನ್ ಫಾಲಿ ನಾರಿಮನ್ ಹೇಳಿದ್ದಾರೆ. ಈ ಎರಡೂ ಕಾನೂನುಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
"ಸರಕಾರಗಳು ಬರುತ್ತವೆ ಹಾಗೂ ಹೋಗುತ್ತವೆ, ಕೋರ್ಟಿಗೆ (ಸುಪ್ರೀಂ) ತನ್ನ ಅಧಿಕಾರ ಬಳಸಿ ಸೆಕ್ಷನ್ 124ಎ ಹಾಗೂ ಯುಎಪಿಎ ಇದರ ಆಕ್ಷೇಪಾರ್ಹ ಭಾಗವನ್ನು ರದ್ದುಗೊಳಿಸುವುದು ಮುಖ್ಯವಾಗಬೇಕು, ಹೀಗಾದಾಗ ಮಾತ್ರ ಜನರು ನಿರಾಳವಾಗಿ ಉಸಿರಾಡಬಹುದು" ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಾರಿಮನ್ ಹೇಳಿದರು.
"ದೇಶದ್ರೋಹದ ಕಾನೂನನ್ನು ಬಳಸಿ ಬ್ರಿಟಿಷರ ಕಾಲದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಜವಾಹರಲಾಲ್ ಅವರ ಸಹಿತ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗಟ್ಟಲು ಬಳಸಲಾಗುತ್ತಿತ್ತು." ಎಂದು ಅವರು ಹೇಳಿದರು.
ಯುಎಪಿಎ ಒಂದು ಅತ್ಯಂತ ಕಠಿಣ ಕಾಯಿದೆ ಹಾಗೂ ಪತ್ರಕರ್ತರ ಮೇಲೆ ಕೂಡ `ಗಂಭೀರ ಪರಿಣಾಮ' ಬೀರುತ್ತದೆ ಎಂದು ಅವರು ಹೇಳಿದರು.





