ಪ್ರಧಾನಿ ತಮ್ಮ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಾಯಿಸಿಕೊಳ್ಳಲಿ: ರಾಮಲಿಂಗಾರೆಡ್ಡಿ

ಬೆಂಗಳೂರು, ಅ.11: ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದ ರೈತರಿಗೂ ನ್ಯಾಯ ಸಿಗಲ್ಲ. ಸಾಮಾನ್ಯ ಜನರಿಗೂ ನ್ಯಾಯ ಸಿಗಲ್ಲ. ಹಾಗಾಗಿ ಅವರು ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು.
ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ರೈತ ವಿರೋಧಿ ಕೃಷಿ ಕಾನೂನುಗಳು ಮತ್ತು ಬಿಜೆಪಿ ದುರಾಡಳಿತಕ್ಕೆ ಬಲಿಯಾದ ರೈತರ ಸ್ಮರಣಾರ್ಥ ಆಯೋಜಿಸಲಾಗಿದ್ದ ಮೌನ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಘಟನೆ ಅಮಾನವೀಯವಾದದ್ದು. ಕೇಂದ್ರದ ಗೃಹ ಖಾತೆಯ ರಾಜ್ಯ ಮಂತ್ರಿಯ ಮಗ ರೈತರ ಮೇಲೆ ವಾಹನ ಹರಿಸಿ ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಆದರೆ ಕೊಲೆಗಡುಕರನ್ನು ಬಿಜೆಪಿ ಸರಕಾರ ಮನೆಯ ಅತಿಥಿಗಳಂತೆ ನೋಡಿಕೊಳ್ಳುತ್ತಿದೆ. ಆರೋಪಿಗಳು ಶರಣಾಗುವವರೆಗೆ ಬಂಧಿಸುವ ಧೈರ್ಯತೋರಿಲ್ಲ. ಈ ದೇಶ ಯಾವ ಕಡೆಗೆ ಸಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ದೇಶ್ಯಾದ್ಯಂತ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಲಖೀಂಪುರ್ ಖೇರಿನಲ್ಲಿ ರೈತರು ಪ್ರತಿಭಟನೆ ಮಾಡುವ ವೇಳೆ ಸಚಿವ ಅಜಯ್ ಮಿಶ್ರಾ ಪುತ್ರ ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡಿದ್ದಾನೆ. ರೈತರನ್ನು ಹತ್ಯೆ ಮಾಡಿದ ಸಚಿವರ ಪುತ್ರನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಬಿಜೆಪಿ ಸರಕಾರ ರಾಜಮರ್ಯಾದೆ ಕೊಡುತ್ತಿದೆ ಎಂದು ಕಿಡಿಗಾರಿದರು.
ರೈತರ ಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮೋದಿಗೆ ಅಂಬಾನಿಯ ಮೊಮ್ಮಗನನ್ನ ನೋಡಲು ಪುರ್ಸೊತ್ತು ಇದೆ. ರೈತರ ಸಮಸ್ಯೆ ಕೇಳಲು ಇಲ್ಲ. ರೈತರು ಸತ್ತರೂ ಕೂಡ ಸಾಂತ್ವಾನ ಹೇಳುವ ಕೆಲಸ ಮಾಡಲಿಲ್ಲ, ಇದು ನಾಚಿಕೆಗೇಡಿನ ವಿಷಯ. ಪುತ್ರನ ವಿರುದ್ಧ ರೈತರ ಹತ್ಯೆ ಆರೋಪ ಇರುವ ಹಿನ್ನೆಲೆಯಲ್ಲಿ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮಾತನಾಡಿ, ಐದು ಮಂದಿ ರೈತರು ಮತ್ತು ಒಬ್ಬ ಪತ್ರಕರ್ತರು ಮೃತಪಟ್ಟಿದ್ದು, ಸರಕಾರ ಏನೂ ಆಗಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಇಷ್ಟೆಲ್ಲ ಆದರೂ ಸರಕಾರ ನಿದ್ದೆ ಮಾಡುವಂತೆ ನಟಿಸುತ್ತಿದ್ದು, ಇವರನ್ನು ಆನೆ ಮೂಲಕವೂ ಎಬ್ಬಿಸಲು ಸಾಧ್ಯವಿಲ್ಲ. ಕೊಲೆಗಡುಕರಿಗೆ ಸರಕಾರ ರಾಜ ಮರ್ಯಾದೆ ನೀಡುತ್ತಿದೆ ಎಂದು ಆರೋಪಿಸಿದರು.
ರೈತರನ್ನು ಹತ್ಯೆ ಮಾಡಿರುವವರ ವಿರುದ್ಧದ ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನಾವು ಜೈಲ್ ಬರೋ ಚಳವಳಿ ನಡೆಸುತ್ತೇವೆ. ಸ್ವಾತಂತ್ರ್ಯಪೂರ್ವದಿಂದಲೂ ನಾವು ಹೋರಾಟ, ಜೈಲು ವಾಸ ಅನುಭವಿಸಿ ಅನುಭವ ಹೊಂದಿದ್ದೇವೆ. ರಾಜೀವ್ ಗಾಂಧಿ, ಇಂದಿರಾಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಕುಟುಂಬದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಹೆದರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ರೈತ ವಿರೋಧಿಯಾಗಿದ್ದು, ರೈತರ ವಿಚಾರದಲ್ಲಿ ನೀತಿ, ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಒಂದೂವರೆ ವರ್ಷದಿಂದಲೂ ಸಹಸ್ರಾರು ರೈತರು ದಿಲ್ಲಿ ಸುತ್ತಮುತ್ತ ಹೋರಾಟ ಮಾಡುತ್ತಿದ್ದು, ಹಲವಾರು ಮಂದಿ ರೈತರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ಬೆಲೆ ತೆರಬೇಕು. ಕೇಂದ್ರದ ವಿರುದ್ಧ ಹೋರಾಟ ಮಾಡುತ್ತಿದ್ದವರನ್ನು ಅಮಾನವೀಯವಾಗಿ ಕೊಂದಿದ್ದು, ರೈತಪರವಾದ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ರಿಝ್ವಾನ್ ಅರ್ಶದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎನ್‍ಎಸ್‍ಯುಐ ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಾಜಕುಮಾರ್, ಕೃಷ್ಣಪ್ಪ, ಜಿ.ಶೇಖರ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
.jpg)







