ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ಮೂರನೇ ಪಟ್ಟಿ

ಹೊಸದಿಲ್ಲಿ,ಅ.11: ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯಡಿ ಭಾರತವು ಸ್ವಿಸ್ ಬ್ಯಾಂಕ್ ಗಳಲ್ಲಿ ಯ ಭಾರತೀಯರ ಖಾತೆಗಳ ವಿವರಗಳ ಮೂರನೇ ಪಟ್ಟಿಯನ್ನು ಪಡೆದುಕೊಂಡಿದೆ. ಈ ವ್ಯವಸ್ಥೆಯಡಿ ವಿವರಗಳನ್ನು ಸ್ವಿಟ್ಜರ್ಲ್ಯಾಂಡ್ ಪ್ರತಿ ವರ್ಷ ಇತರ ದೇಶಗಳೊಂದಿಗೆ ಹಂಚಿಕೊಳ್ಳುತ್ತದೆ. ಮೂರನೇ ವಾರ್ಷಿಕ ಪ್ರಕ್ರಿಯೆಯಲ್ಲಿ ಅದು ಸುಮಾರು 33 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು 96 ದೇಶಗಳೊಂದಿಗೆ ಹಂಚಿಕೊಂಡಿದೆ.
ಈ ವರ್ಷದ ಮಾಹಿತಿ ವಿನಿಮಯವು ಆಂಟಿಗುವಾ ಮತ್ತು ಬಾರ್ಬುಡಾ, ಅಜರಬೈಜಾನ್,ಡೊಮನಿಕಾ,ಘಾನಾ, ಲೆಬನಾನ್, ಮಕಾವು, ಪಾಕಿಸ್ತಾನ,ಕತರ್, ಸಮೋವಾ ಮತ್ತು ಮೌಟು ಸೇರಿದಂತೆ ಹೆಚ್ಚುವರಿಯಾಗಿ 10 ದೇಶಗಳನ್ನು ಒಳಗೊಂಡಿದೆ ಎಂದು ಸ್ವಿಟ್ಜರ್ಲ್ಯಾಂಡ್ ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಟಿಎ) ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸ್ವಿಟ್ಝರ್ಲ್ಯಾಂಡ್ ಮತ್ತು 70 ದೇಶಗಳು ಪರಸ್ಪರ ಮಾಹಿತಿಗಳನ್ನು ವಿನಿಮಯಿಸಿಕೊಂಡಿದ್ದರೆ,26 ದೇಶಗಳಿಂದ ಮಾಹಿತಿಗಳನ್ನು ಸ್ವೀಕರಿಸಿರುವ ಸ್ವಿಟ್ಝರ್ಲ್ಯಾಂಡ್ ಪ್ರತಿಯಾಗಿ ಅವುಗಳಿಗೆ ಮಾಹಿತಿಗಳನ್ನು ಒದಗಿಸಿಲ್ಲ. ಆ ದೇಶಗಳು ಗೋಪ್ಯತೆ ಮತ್ತು ಡಾಟಾ ಭದ್ರತೆಯ ಕುರಿತು ಅಂತರರಾಷ್ಟ್ರೀಯ ಅಗತ್ಯಗಳನ್ನು ಪೂರೈಸದಿರುವುದು ಅಥವಾ ಮಾಹಿತಿಗಳ ಸ್ವೀಕಾರವನ್ನು ಅವು ಆಯ್ಕೆ ಮಾಡಿಕೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.
ಎಫ್ಟಿಎ ಎಲ್ಲ 96 ದೇಶಗಳ ಹೆಸರುಗಳು ಮತ್ತು ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಿಲ್ಲವಾದರೂ,ಭಾರತವು ಸತತ ಮೂರನೇ ವರ್ಷ ಮಾಹಿತಿಗಳನ್ನು ಸ್ವೀಕರಿಸಿರುವ ದೇಶಗಳಲ್ಲಿ ಸೇರಿದೆ ಮತ್ತು ಈ ಮಾಹಿತಿಗಳು ಸ್ವಿಸ್ ಹಣಕಾಸು ಸಂಸ್ಥೆಗಳಲ್ಲಿ ಖಾತೆಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿನಿಮಯವು ಕಳೆದ ತಿಂಗಳು ನಡೆದಿದ್ದು, ಸ್ವಿಟ್ಝರ್ಲ್ಯಾಂಡ್ ಮಾಹಿತಿಗಳ ಮುಂದಿನ ಕಂತನ್ನು 2022 ಸೆಪ್ಟಂಬರ್ ನಲ್ಲಿ ಹಂಚಿಕೊಳ್ಳಲಿದೆ.
ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ಮೊದಲ ಕಂತನ್ನು 2019ರಲ್ಲಿ ಮತ್ತು ಎರಡನೇ ಕಂತನ್ನು 2020ರಲ್ಲಿ ಸ್ವೀಕರಿಸಿತ್ತು.
ತಜ್ಞರ ಪ್ರಕಾರ ಭಾರತವು ಸ್ವೀಕರಿಸಿರುವ ಮಾಹಿತಿಗಳು ಠೇವಣಿಗಳು ಮತ್ತು ಹಣ ವರ್ಗಾವಣೆಗಳ ಹಾಗೂ ಸೆಕ್ಯೂರಿಟಿಗಳು ಮತ್ತು ಇತರ ಸ್ವತ್ತುಗಳಲ್ಲಿ ಹೂಡಿಕೆಗಳ ಮೂಲಕ ಸೇರಿದಂತೆ ಎಲ್ಲ ಗಳಿಕೆಗಳ ಸಮಗ್ರ ವಿವರಗಳನ್ನು ಒದಗಿಸುವುದರಿಂದ ಅಕ್ರಮ ಸಂಪತ್ತನ್ನು ಹೊಂದಿರುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಬಲವಾದ ಪ್ರಕರಣವನ್ನು ರೂಪಿಸಲು ಸಾಕಷ್ಟು ನೆರವಾಗಲಿವೆ.
ವಿವರಗಳು ಹೆಚ್ಚಾಗಿ ಹಾಲಿ ಆಗ್ನೇಯ ಏಷ್ಯಾದ ದೇಶಗಳು ಹಾಗೂ ಅಮೆರಿಕ,ಬ್ರಿಟನ್,ಕೆಲವು ಆಫ್ರಿಕನ್ ಮತ್ತು ಕ್ಷಿಣ ಅಮೆರಿಕ ದೇಶಗಳಲ್ಲಿ ನೆಲೆಗೊಂಡಿರುವ ಅನಿವಾಸಿ ಭಾರತೀಯರು ಸೇರಿದಂತೆ ಉದ್ಯಮಿಗಳಿಗೆ ಸಂಬಂಧಿಸಿವೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಅಧಿಕಾರಿಗಳು ತಿಳಿಸಿದರು.
ಇದಲ್ಲದೆ, ಸ್ವಿಸ್ ಅಧಿಕಾರಿಗಳು ತೆರಿಗೆ ವಂಚನೆ ಸೇರಿದಂತೆ ಹಣಕಾಸು ಅಪರಾಧಗಳಲ್ಲಿ ತನಿಖೆಗಳನ್ನೊಂಡ ಪ್ರಕರಣಗಳಲ್ಲಿ ಆಡಳಿತಾತ್ಮಕ ನೆರವಿಗಾಗಿ ಕೋರಿಕೆಗಳ ಮೇರೆಗೆ ಈ ವರ್ಷ ಇದುವರೆಗೆ ನೂರಕ್ಕೂ ಅಧಿಕ ಭಾರತೀಯರು ಮತ್ತು ಸಂಸ್ಥೆಗಳ ಕುರಿತು ಮಾಹಿತಿಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಈ ಪ್ರಕರಣಗಳು ಹೆಚ್ಚಾಗಿ 2018ಕ್ಕೆ ಮೊದಲು ಮುಚ್ಚಿರಬಹುದಾದ ಹಳೆಯ ಖಾತೆಗಳಿಗೆ ಸಂಬಂಧಿಸಿವೆ.
ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯು 2018ರಲ್ಲಿ ಸಕ್ರಿಯವಾಗಿದ್ದ ಅಥವಾ ಮುಚ್ಚಲಾಗಿದ್ದ ಖಾತೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಪೈಕಿ ಕೆಲವು ಪ್ರಕರಣಗಳು ಪನಾಮಾ,ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಕೇಮನ್ ದ್ವೀಪಗಳಂತಹ ಸಾಗರೋತ್ತರ ದೇಶಗಳಲ್ಲಿ ಭಾರತೀಯರು ಸ್ಥಾಪಿಸಿದ ಸಂಸ್ಥೆಗಳಿಗೆ ಸಂಬಂಧಿಸಿವೆ. ಇಂತಹ ಭಾರತೀಯರಲ್ಲಿ ಹೆಚ್ಚಾಗಿ ಉದ್ಯಮಿಗಳು,ಕೆಲವು ರಾಜಕಾರಣಿಗಳು,ಹಿಂದಿನ ರಾಜಮನೆತನಗಳು ಸದಸ್ಯರು ಸೇರಿದ್ದಾರೆ.
ಮಾಹಿತಿ ವಿನಿಮಯ ವ್ಯವಸ್ಥೆಯಡಿ ಕಟ್ಟುನಿಟ್ಟಾದ ಗೋಪ್ಯತೆಯ ಷರತ್ತನ್ನು ಬೆಟ್ಟು ಮಾಡಿರುವ ಅಧಿಕಾರಿಗಳು,ಭಾರತೀಯರು ಸ್ವಿಸ್ ಬ್ಯಾಂಕ್ಗಳಲ್ಲಿ ಹೊಂದಿರುವ ಖಾತೆಗಳ ನಿಖರವಾದ ಸಂಖ್ಯೆ ಅಥವಾ ಆಸ್ತಿಗಳ ಪ್ರಮಾಣವನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ. ವಿನಿಮಯಗೊಂಡಿರುವ ಮಾಹಿತಿಗಳಿಂದಾಗಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಗಳಲ್ಲಿ ತಮ್ಮ ಹಣಕಾಸು ಖಾತೆಗಳನ್ನು ಸರಿಯಾಗಿ ಘೋಷಿಸಿದ್ದಾರೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಲು ತೆರಿಗೆ ಅಧಿಕಾರಿಗಳಿಗೆ ಸಾಧ್ಯವಾಗಲಿದೆ.
ಇದೇ ಮೊದಲ ಬಾರಿಗೆ ಸ್ವಿಟ್ಝರ್ಲ್ಯಾಂಡ್ ತನ್ನ ದೇಶದಲ್ಲಿ ವಿದೇಶಿಯರು ಹೊಂದಿರುವ ರಿಯಲ್ ಎಸ್ಟೇಟ್ ಆಸ್ತಿಗಳ ಕುರಿತು ವಿವರಗಳನ್ನೂ ಹಂಚಿಕೊಳ್ಳಲು ಒಪ್ಪಿಕೊಂಡಿದೆ. ಆದರೆ ಲಾಭರಹಿತ ಸಂಸ್ಥೆಗಳು ಮತ್ತು ಇತರ ಅಂತಹ ಪ್ರತಿಷ್ಠಾನಗಳಿಗೆ ದೇಣಿಗೆಗಳು ಹಾಗೂ ಡಿಜಿಟಲ್ ಕರೆನ್ಸಿಗಳಲ್ಲಿ ಹೂಡಿಕೆಯ ವಿವರಗಳನ್ನು ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.
ಇದನ್ನು ವಿದೇಶಗಳಲ್ಲಿ ಶೇಖರಿಸಿರುವ ಕಪ್ಪುಹಣದ ವಿರುದ್ಧ ಭಾರತದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಅಧಿಕಾರಿಗಳಿಗೆ ಈಗ ಸ್ವಿಟ್ಝರ್ಲ್ಯಾಂಡ್ನಲ್ಲಿ ಭಾರತೀಯರು ಹೊಂದಿರುವ ಫ್ಲಾಟ್ಗಳು,ಅಪಾರ್ಟ್ಮೆಂಟ್ ಗಳು ಮತ್ತು ವಸತಿ ಸಂಕೀರ್ಣಗಳ ಕುರಿತು ಹಾಗೂ ಇಂತಹ ಆಸ್ತಿಗಳ ಮೂಲಕ ಆದಾಯದ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದು ಸಂಬಂಧಿಸಿದ ವ್ಯಕ್ತಿಗಳ ತೆರಿಗೆ ಬಾಧ್ಯತೆಗಳನ್ನು ಪರಿಶೀಲಿಸಲು ನೆರವಾಗುತ್ತದೆ.







