2020ರಲ್ಲಿ ದಾಖಲಾದ ಪೋಕ್ಸೊ ಪ್ರಕರಣಗಳಲ್ಲಿ 99 ಶೇ.ದಷ್ಟು ಬಾಲಕಿಯರ ಮೇಲಿನ ದೌರ್ಜನ್ಯಗಳು: ವರದಿ

ಹೊಸದಿಲ್ಲಿ, ಅ. 11: 2020ರಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳ ಪೈಕಿ ಶೇ. 99ಕ್ಕೂ ಅಧಿಕ ಪ್ರಕರಣಗಳು ಬಾಲಕಿಯರಿಗೆ ಸಂಬಂಧಿಸಿದ್ದಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್ಸಿಆರ್ಬಿ)ಯ ಅಂಕಿ-ಅಂಶಗಳು ತಿಳಿಸಿವೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಹೆಚ್ಚು ದುರ್ಬಲ ವರ್ಗದವರಾಗಿ ಮುಂದುವರಿದಿದ್ದಾರೆ ಎಂಬುದನ್ನು ಎನ್ಸಿಆರ್ಬಿಯ ಈ ಅಂಕಿ-ಅಂಶ ಬಹಿರಂಗಗೊಳಿಸಿದೆ.
ಪೊಕ್ಸೊ ಕಾಯ್ದೆ ಅಡಿಯ ಅಪರಾಧಗಳಲ್ಲಿ ಸಂತ್ರಸ್ತ 28,327 ಮಕ್ಕಳ ಪೈಕಿ 28,058 ಬಾಲಕಿಯರು ಎಂದು ಎನ್ಸಿಆರ್ಬಿಯ ಅಂಕಿ-ಅಂಶವನ್ನು ವಿಶ್ಲೇಷಿಸಿ ಸರಕಾರೇತರ ಸಂಸ್ಥೆ ಚೈಲ್ಡ್ ರೈಟ್ಸ್ ಆ್ಯಂಡ್ ಯು (ಸಿಆರ್ವೈ-ಕ್ರೈ) ಬಹಿರಂಗಪಡಿಸಿದೆ. ಪೋಕ್ಸೊ ಕಾಯೆ ಅಡಿಯ ಅಪರಾಧಗಳಲ್ಲಿ 16ರಿಂದ 18 ವರ್ಷ ಪ್ರಾಯ ಗುಂಪಿನ ಅತ್ಯಧಿಕ 14,092 ಬಾಲಕಿಯರು ಹಾಗೂ 12ರಿಂದ 16 ಪ್ರಾಯ ಗುಂಪಿನ 10,949 ಬಾಲಕಿಯರು ಸಂತ್ರಸ್ತರಾಗಿದ್ದಾರೆ ಎಂದು ವಿಶ್ಲೇಷಣೆ ಹೇಳಿದೆ.
ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆದರೆ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಾಲಕರಿಗಿಂತ ಎಲ್ಲಾ ಪ್ರಾಯ ಗುಂಪಿನ ಬಾಲಕಿಯರು ಹೆಚ್ಚು ಸಂತ್ರಸ್ತರಾಗಿದ್ದಾರೆ ಎಂದು ಎನ್ಸಿಆರ್ಬಿ ದತ್ತಾಂಶ ಬಹಿರಂಗಪಡಿಸಿದೆ. ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಾಚರಣೆಯಾದ ಸೋಮವಾರ ಸಿಆರ್ವೈ ಪ್ರಪಂಚದಾದ್ಯಂತ ಬಾಲಕಿಯರಿಗಿರುವ ಹಕ್ಕುಗಳ ಬಗ್ಗೆ ಮಾತನಾಡುತ್ತಿದೆ. ಆದರೆ, ಬಾಲಕಿಯರು ಸಮಾಜ ಅತ್ಯಂತ ದುರ್ಬಲ ವರ್ಗಗಳಲ್ಲಿ ಒಂದಾಗಿ ಇರುವುದನ್ನು ಎನ್ಸಿಆರ್ಬಿ ದತ್ತಾಂಶ ಬಹಿರಂಗಪಡಿಸಿರುವುದು ಆತಂಕಕಾರಿ ಎಂದು ವರದಿ ತಿಳಿಸಿದೆ.