ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪ್ರಕರಣದಲ್ಲಿ ಪತಿ ದೋಷಿ: ಕೇರಳ ನ್ಯಾಯಾಲಯ ತೀರ್ಪು

ಕೊಲ್ಲಂ, ಅ. 11: ವಿಶೇಷ ಚೇತನ ಯುವತಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸೂರಜ್ ದೋಷಿ ಎಂದು ಕೇರಳ ನ್ಯಾಯಾಲಯ ತೀರ್ಪು ನೀಡಿದೆ. ಸೂರಜ್ಗೆ ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 13ರಂದು ಪ್ರಕಟಿಸಲಾಗುವುದು ಎಂದು ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹೇಳಿದೆ.
ಕೊಲ್ಲಂ ಜಿಲ್ಲೆಯ ಅಂಚಲ್ನ ನಿವಾಸಿಯಾಗಿದ್ದ ಸೂರಜ್ (25) ತನ್ನ ಪತ್ನಿಯನ್ನು ಹತ್ಯೆಗೈಯಲು ನಾಗರ ಹಾವನ್ನು 2020 ಮೇ 7ರಂದು ಪತ್ನಿ ಉತ್ತರಾ ಮಲಗಿದ್ದ ಕೋಣೆಗೆ ಬಿಟ್ಟಿದ್ದ. ಪ್ರಾಥಮಿಕ ತನಿಖೆಯಿಂದ ಉತ್ತರಾ ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಸಂಶಯಗೊಂಡ ಉತ್ತಾರ ಕುಟುಬ ಸೂರಜ್ ಹಾಗೂ ಆತನ ಕುಟುಂಬ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಸೂರಜ್ನನ್ನು ಪೊಲೀಸರು ಬಂದಿಸಿದ್ದರು. ವಿಚಾರಣೆ ವೇಳೆ ಸೂರಜ್ ಪತ್ನಿ ಉತ್ತರಾಗೆ ನಿದ್ರೆ ಮಾತ್ರ ನೀಡಿ, ಬಳಿಕ ಹಾವನ್ನು ಆಕೆಯ ಹತ್ತಿರ ಬಿಟ್ಟಿರುವುದನ್ನು ಒಪ್ಪಿಕೊಂಡಿದ್ದ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ಇರಲಿಲ್ಲ. ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷಗಳನ್ನು ಅವಲಂಬಿಸಿ ಪೊಲೀಸರು ಪ್ರಕರಣ ರೂಪಿಸಿದ್ದರು.





