ಯುವರಾಜ ಆ್ಯಂಡ್ರ್ಯೂ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಂದಿನ ಕ್ರಮದ ಅತ್ಯವಿಲ್ಲ: ಬ್ರಿಟನ್ ಪೊಲೀಸರ ಹೇಳಿಕೆ
ಲಂಡನ್, ಅ.11: ಬ್ರಿಟನ್ ರಾಣಿ ಎಲಿಝಬೆತ್ ಪುತ್ರ, ಯುವರಾಜ ಆ್ಯಂಡ್ರ್ಯೂ ಹಾಗೂ ಅಮೆರಿಕದ ಉದ್ಯಮಿ ಜೆಫ್ರೀ ಎಪ್ಸ್ಟೀನ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪುರಾವೆಗಳ ಮರುಪರಿಶೀಲನೆ ನಡೆಸಿದ್ದು ಮುಂದಿನ ಕ್ರಮದ ಅಗತ್ಯವಿಲ್ಲ ಎಂದು ಇಂಗ್ಲೆಂಡ್ ಪೊಲೀಸರು ಹೇಳಿದ್ದಾರೆ.
ಅಮೆರಿಕದಲ್ಲಿ ಹೂಡಲಾಗಿರುವ ಮೊಕದ್ದಮೆ ಕುರಿತು, ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆ ದಾಖಲೆಗಳನ್ನು ಪರಿಶೀಲಿಸಿದೆ. ಈ ಪರಿಶೀಲನೆ ಮುಕ್ತಾಯವಾಗಿದ್ದು ನಾವು ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಲಂಡನ್ ಪೊಲೀಸ್ ಮುಖ್ಯಸ್ಥೆ ಕ್ರೆಸ್ಸಿಡಾ ಡಿಕ್ ಸೋಮವಾರ ಹೇಳಿದ್ದಾರೆ.
ಯುವರಾಜ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ವರ್ಜೀನಿಯಾ ಗ್ಯುಫ್ರೆ ಮೊಕದ್ದಮೆ ದಾಖಲಿಸಿದ್ದು ಇದನ್ನು ಆ್ಯಂಡ್ರ್ಯೂ ನಿರಂತರ ನಿರಾಕರಿಸುತ್ತಿದ್ದಾರೆ. ಆದರೂ ಈ ಆರೋಪದ ಬಗ್ಗೆ ಗಮನ ಹರಿಸಲಾಗುವುದು. ಕಾನೂನಿಗಿಂತ ಯಾರೂ ಮಿಗಿಲಲ್ಲ, ಆದರೆ ತನಿಖೆ ಆರಂಭಿಸುವುದಿಲ್ಲ ಎಂದು ಕಳೆದ ಆಗಸ್ಟ್ ನಲ್ಲಿ ಕ್ರೆಸ್ಸಿಡಾ ಡಿಕ್ ಹೇಳಿದ್ದರು.
ತಾನು 17 ವರ್ಷದವಳಿದ್ದಾಗ , 2001ರಲ್ಲಿ ಅಮೆರಿಕದ ಉದ್ಯಮಿ ಜೆಫ್ರೀ ಎಪ್ಸ್ಟೀನ್ ಲಂಡನ್ ರಾಜಮನೆತನದಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿ ಲಂಡನ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಯುವರಾಜ ಆ್ಯಂಡ್ರ್ಯೂರಿಗೆ ಪರಿಚಯ ಮಾಡಿಕೊಟ್ಟಿದ್ದರು. ಬಳಿಕ ಆ್ಯಂಡ್ರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಗ್ಯುಫ್ರೆ 2015ರಲ್ಲಿ ಪ್ರಕರಣ ದಾಖಲಿಸಿದ್ದಳು. ಇದನ್ನು ಆ್ಯಂಡ್ರ್ಯೂ ನಿರಾಕರಿಸಿದ್ದರೂ ಎಪ್ಸ್ಟೀನ್ ತನ್ನ ಗೆಳೆಯ ಎಂದು ಹೇಳಿಕೆ ನೀಡಿದ್ದರು. ಮುಂದಿನ ದಿನದಲ್ಲಿ ಎಪ್ಸ್ಟೀನ್ ವಿರುದ್ಧದ ಮಹಿಳೆಯರ ಕಳ್ಳಸಾಗಾಣಿಕೆ ಪ್ರಕರಣ ದೃಢಪಟ್ಟು ಆತ ಜೈಲು ಸೇರಿದ ಹಿನ್ನೆಲೆಯಲ್ಲಿ ಆ್ಯಂಡ್ರ್ಯೂ ಯುವರಾಜನ ಅಧಿಕೃತ ಹುದ್ದೆಯಿಂದ ಕೆಳಗಿಳಿಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು.