ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ದಾಳಿಯಾದ್ರೆ ಮತ್ತಷ್ಟು ಭ್ರಷ್ಟಾಚಾರ ಹೊರಕ್ಕೆ: ಬೇಳೂರು ಗೋಪಾಲಕೃಷ್ಣ ಆರೋಪ

ಫೈಲ್ ಚಿತ್ರ
ಶಿವಮೊಗ್ಗ, ಅ.11: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿಯಾದಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಮನೆ ಮೇಲೂ ಐಟಿ ದಾಳಿಯಾದರೆ ಇನ್ನಷ್ಟು ಭ್ರಷ್ಟಾಚಾರದ ಹಣ ಹೊರಬರಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿಯಾಗಿದೆ. ನೀರಾವರಿ ಇಲಾಖೆಯಲ್ಲಿನ ಎರಡು ಸಾವಿರ ಕೋಟಿ ರೂ. ಅವ್ಯವಹಾರ ಸಂಬಂಧ ಈ ದಾಳಿಯಾಗಿದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಮನೆ ಮೇಲೂ ಐಟಿ ಅಥವಾ ಜಾರಿ ನಿರ್ದೇಶನಾಲಯದಿಂದ ದಾಳಿಯಾದರೆ ಇನ್ನಷ್ಟು ಭ್ರಷ್ಟಾಚಾರದ ಹಣ ಹೊರಬರಲಿದೆ ಎಂದರು.
ಬಿಜೆಪಿಯೊಳಗೆ ಯಡಿಯೂರಪ್ಪ ಗುಂಪು ಮತ್ತು ಆರೆಸ್ಸೆಸ್ ಗುಂಪುಗಳಿವೆ. ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ ಗುಂಪು ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳಬಾರದು ಎಂಬ ಕಾರಣಕ್ಕೆ ಉಮೇಶ್ ಮನೆ ಮೇಲೆ ಐಟಿ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದರು.
ಇನ್ನು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದರ ಕಳೆದು ಹೋಗಿದ್ದಾರೆ. ಅವರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.







