ಚುನಾವಣಾ ಬಾಂಡ್: ಪ್ರಾದೇಶಿಕ ಪಕ್ಷಗಳ ಗಳಿಕೆ ಎಷ್ಟು ಗೊತ್ತೇ?
ಹೊಸದಿಲ್ಲಿ, ಅ.12: ಹದಿನಾಲ್ಕು ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್ ಮೂಲಕ 2019-20ನೇ ಸಾಲಿನಲ್ಲಿ 447.49 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿವೆ. ಇದು 42 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಶೇಕಡ 50.97ರಷ್ಟಾಗಿದೆ. ಈ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು 877.957 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿವೆ.
ಒಟ್ಟು 42 ಪ್ರಾದೇಶಿಕ ಪಕ್ಷಗಳ ಪೈಕಿ 14 ಪಕ್ಷಗಳು ಮಾತ್ರ ಚುನಾವಣಾ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸಿರುವುದನ್ನು ಬಹಿರಂಗಪಡಿಸಿವೆ ಎಂದು 2019-20ನೇ ಸಾಲಿನ ವಿವಿಧ ಪ್ರಾದೇಶಿಕ ಪಕ್ಷಗಳ ಆದಾಯ ಮತ್ತು ವೆಚ್ಚ ಕುರಿತ ವಿಶ್ಲೇಷಣೆ ನಡೆಸಿದ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿವರಿಸಿದೆ. ಈ ಪಕ್ಷಗಳೆಂದರೆ ಟಿಆರ್‌ಎಸ್, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಶಿವಸೇನೆ, ಎಎಪಿ, ಜೆಡಿಯು, ಎಸ್ಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಎಐಎಡಿಎಂಕೆ ಮತ್ತು ಜೆಎಂಎಂ.
ಸ್ವಯಂಪ್ರೇರಿತ ದೇಣಿಗೆ ಮೂಲಕ 42 ಪ್ರಾದೇಶಿಕ ಪಕ್ಷಗಳು 676.326 ಕೋಟಿ ರೂಪಾಯಿ ಗಳಿಸಿವೆ. ಇದು ಈ ಪಕ್ಷಗಳ ಒಟ್ಟು ಗಳಿಕೆಯ ಶೇಕಡ 77.03ರಷ್ಟಾಗಿದೆ. ಇತರ ದೇಣಿಗೆ ಮತ್ತು ಕೊಡುಗೆಗಳ ಮೂಲಕ ಕ್ರೋಡೀಕರಿಸಿದ ಮೊತ್ತ 228.828 ಕೋಟಿ ಅಥವಾ ಶೇಕಡ 26.06ರಷ್ಟಾಗಿವೆ. 113.761 ಕೋಟಿ ರೂಪಾಯಿಗಳನ್ನು ಠೇವಣಿಗಳ ಮೇಲಿನ ಬಡ್ಡಿಯಾಗಿ ಆದಾಯ ಗಳಿಸಿವೆ ಎಂದು ವಿವರಿಸಲಾಗಿದೆ.
ತೆಲಂಗಾಣ ರಾಷ್ಟ್ರೀಯ ಸಮಿತಿ ಗರಿಷ್ಠ ಆದಾಯವನ್ನು ಘೋಷಿಸಿದ್ದು, ಒಟ್ಟು 130.46 ಕೋಟಿ ರೂಪಾಯಿ ಆದಾಯ ಗಳಿಸಿರುವ ಟಿಆರ್‌ಎಸ್, ಒಟ್ಟು 14 ಪಕ್ಷಗಳು ಗಳಿಸಿದ ಆದಾಯದ ಶೇಕಡ 14.86ರಷ್ಟು ಪಾಲು ಹೊಂದಿದೆ. ಶಿವಸೇನೆ 111.403 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಒಟ್ಟು ಆದಾಯದಲ್ಲಿ ಈ ಪಕ್ಷದ ಪಾಲು ಶೇಕಡ 12.69 ಆಗಿದೆ. ವೈಎಸ್‌ಆರ್ ಕಾಂಗ್ರೆಸ್ ಒಟ್ಟು 92.403 ಕೋಟಿ ರೂಪಾಯಿ ಆದಾಯ ಪಡೆದಿದ್ದು, ಇದು ಒಟ್ಟು ಆದಾಯದ ಶೇಕಡ 10.56ರಷ್ಟು.