‘ನನ್ನ ಆಸೆ ಈಡೇರಿಸಿ’ಎಂದು ಪ್ರಧಾನಿ ಮೋದಿಗೆ ಮನವಿ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಬಾಲಕ

ಭೋಪಾಲ್: ಉತ್ತಮ ನೃತ್ಯಗಾರನಾಗಲು ವಿಫಲನಾದನೆಂಬ ಕಾರಣಕ್ಕೆ ಹದಿಹರೆಯದ ಹುಡುಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಹಾಡಿದ ಹಾಡು, ನೇಪಾಳಿ ಕಲಾವಿದ ಸುಶಾಂತ್ ಖಾತ್ರಿ ಅವರ ನೃತ್ಯ ಸಂಯೋಜನೆಯನ್ನು ಒಳಗೊಂಡ ಮ್ಯೂಸಿಕ್ ವೀಡಿಯೊ ತಯಾರಿಸುವ ತನ್ನ ಕೊನೆಯ ಆಸೆಯನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ 'ಆತ್ಮಹತ್ಯೆ ಪತ್ರ' ವನ್ನು 16 ವರ್ಷದ ಬಾಲಕ ಬಿಟ್ಟು ಹೋಗಿದ್ದಾನೆ ಎಂದು ವರದಿಯಾಗಿದೆ.
11 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ರವಿವಾರ ರಾತ್ರಿ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜ್ಹಾನ್ಸಿ ರೋಡ್ ಪೊಲೀಸ್ ಠಾಣೆಯ ಪ್ರಭಾರಿ ಸಂಜೀವ್ ನಯನ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಬಾಲಕ ಬರೆದಿರುವ 'ಆತ್ಮಹತ್ಯೆ ಪತ್ರ' ಆತನ ದೇಹದಲ್ಲಿ ಪತ್ತೆಯಾಗಿದ್ದು, ಆತನ ಕುಟುಂಬ ಮತ್ತು ಸ್ನೇಹಿತರು ಬೆಂಬಲ ನೀಡದ ಕಾರಣ ತನಗೆ ಉತ್ತಮ ನೃತ್ಯಗಾರನಾಗಲು ಸಾಧ್ಯವಾಗಿಲ್ಲ ಎಂದು ಆತ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಆತ್ಮಹತ್ಯೆಯ ಪತ್ರದಲ್ಲಿ ಬಾಲಕನು ತನ್ನ ಮರಣದ ನಂತರ ಮ್ಯೂಸಿಕ್ ವೀಡಿಯೊ ಮಾಡಬೇಕೆಂದು ಹೇಳಿದ್ದಾನೆ. ಇದರಲ್ಲಿ ಅರಿಜಿತ್ ಸಿಂಗ್ ಹಾಡನ್ನು ಹಾಡಬೇಕು ಮತ್ತು ನೇಪಾಳಿ ಕಲಾವಿದ ಸುಶಾಂತ್ ಖತ್ರಿ ನೃತ್ಯವನ್ನು ಸಂಯೋಜಿಸಬೇಕು. ಸಂಗೀತ ವೀಡಿಯೊ ನನ್ನ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂದು ಬಾಲಕ ಬರೆದಿದ್ದಾನೆ. ತನ್ನ ಕೊನೆಯ ಆಸೆಯನ್ನು ಪೂರ್ಣಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾನೆ" ಎಂದು ಶರ್ಮಾ ಹೇಳಿದರು.







